ನವದೆಹಲಿ: ಸಂಸ್ಕೃತ ಶಿಕ್ಷಣದಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಸೋಮವಾರ ಉತ್ಕರ್ಷ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸಂಸ್ಕೃತ ಶಿಕ್ಷಣವು ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದಿದ್ದಾರೆ.
ಮೇ 7, 2022 ರಿಂದ ನವದೆಹಲಿಯಲ್ಲಿ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯವು ಮೂರು ದಿನಗಳ ಉತ್ಕರ್ಷ್ ಮಹೋತ್ಸವವನ್ನು ಆಯೋಜಿಸಿದೆ. ಮಹೋತ್ಸವವು ದೇಶಾದ್ಯಂತ ಸಂಸ್ಕೃತ ಭಾಷೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಂಸ್ಕೃತವು ಕೇವಲ ಭಾಷೆಯಲ್ಲ, ಅದು ಒಂದು ಭಾವನೆಯಾಗಿದೆ. ನಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯೇ ನಮ್ಮ ಸಂಪತ್ತು ಎಂದು ಅವರು ಹೇಳಿದ್ದಾರೆ. ಶತಮಾನಗಳ ಕಾಲ ನಮ್ಮ ನಾಗರಿಕತೆಯನ್ನು ಮುಂದಕ್ಕೆ ಕೊಂಡೊಯ್ಯುವ ಮತ್ತು ವಸುಧೈವ ಕುಟುಂಬಕಂ ಆದರ್ಶಗಳನ್ನು ಸಾಧಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವಂತೆ, ಸಂಸ್ಕೃತ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಿಗೆ ಸರ್ಕಾರವು ಪ್ರಾಮುಖ್ಯತೆಯನ್ನು ನೀಡಿದೆ ಎಂದು ಸಚಿವರು ಒತ್ತಿ ಹೇಳಿದ್ದಾರೆ.
ಹ್ಯೂಯೆನ್ ತ್ಸಾಂಗ್‌ನ ಕಾಲದಿಂದ ಇಂದಿನವರೆಗೆ ಸಂಸ್ಕೃತದ ಸ್ವಾಭಾವಿಕತೆ, ಆಧುನಿಕತೆ ಮತ್ತು ವೈಜ್ಞಾನಿಕತೆಗೆ ಯಾವುದೇ ಪುರಾವೆ ಅಗತ್ಯವಿಲ್ಲ ಎಂದು ಸಚಿವರು ಉಲ್ಲೇಖಿಸಿದ್ದಾರೆ. ಅವರು ವೇದಗಳ ಭಾಷೆಯಾದ ಸಂಸ್ಕೃತದ ಪುನರುಜ್ಜೀವನದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರಿದ್ದಾರೆ.
ಉತ್ಕರ್ಷ್ ಮಹೋತ್ಸವದಲ್ಲಿ ನಡೆದ ಚರ್ಚೆಗಳು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಜಾಗತಿಕ ಕಲ್ಯಾಣಕ್ಕೆ ದಾರಿ ಮಾಡಿಕೊಡಲು 21ನೇ ಶತಮಾನದ ಶಿಕ್ಷಣ ವ್ಯವಸ್ಥೆಗೆ ಮಾರ್ಗಸೂಚಿಯನ್ನು ತೋರಿಸುತ್ತವೆ ಎಂದು ಸಚಿವರು ಆಶಿಸಿದ್ದಾರೆ.