ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರ ವಿಚ್ಛೇದನಕ್ಕೆ ಕಾರಣವಾಗ್ತಿದೆ. ಸುಖಕರ ಸಂಸಾರ ಕಾಪಾಡಿಕೊಳ್ಳುವುದು ಬಹಳ ಕಷ್ಟ. ನಾವು ತಿಳಿದು ಹಾಗೂ ತಿಳಿಯದೇ ಮಾಡಿದ ಅನೇಕ ತಪ್ಪುಗಳು ನಮ್ಮ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ.
ಸಂಗಾತಿ ಮೇಲೆ ಕೋಪಗೊಂಡು ಜಗಳವಾಡಿಕೊಳ್ಳುವುದು ದಾಂಪತ್ಯದಲ್ಲಿ ಸಾಮಾನ್ಯ. ಆದ್ರೆ ಸಣ್ಣ ವಿಚಾರಕ್ಕೆ ಪದೇ ಪದೇ ಸಂಗಾತಿ ತೆಗಳುವುದು ಸರಿಯಲ್ಲ. ಸಂಗಾತಿ ಮೇಲೆ ಕೋಪ ಬಂದ್ರೂ ಆ ಕ್ಷಣ ಅದನ್ನು ನಿಯಂತ್ರಿಸಿಕೊಳ್ಳುವುದು ಒಳ್ಳೆಯದು. ಕೆಲ ಸಮಯದ ನಂತ್ರ ಶಾಂತವಾಗಿ ಆ ಬಗ್ಗೆ ಸಂಗಾತಿಗೆ ವಿವರಿಸಿದ್ರೆ ಗಲಾಟೆ ತಪ್ಪುತ್ತದೆ.
ಮದುವೆ ಎರಡು ವ್ಯಕ್ತಿಗಳ ನಡುವೆ ಆಗುವಂತಹದ್ದಲ್ಲ. ಎರಡು ಕುಟುಂಬಗಳು ಒಂದಾಗುವಂತಹದ್ದು. ಮದುವೆ ನಂತ್ರ ಜೀವನದಲ್ಲಿ ಅನೇಕ ಬದಲಾವಣೆಗಳಾಗುತ್ತದೆ. ನಮ್ಮ ಕುಟುಂಬವೊಂದೇ ಅಲ್ಲ ಸಂಗಾತಿ ಕುಟುಂಬವನ್ನೂ ಪ್ರೀತಿಸಲು ಪ್ರಾರಂಭಿಸಬೇಕಾಗುತ್ತದೆ. ಆಗ ಮಾತ್ರ ಜೀವನ ಸುಖವಾಗಿರಲು ಸಾಧ್ಯ.
ದಂಪತಿ ಪ್ರತಿಯೊಂದರಲ್ಲೂ ಪಾಲುದಾರರಾಗಿರುತ್ತಾರೆ. ಎಲ್ಲ ಕೆಲಸವನ್ನು ಒಬ್ಬರಿಗೆ ಬಿಟ್ಟು ಇನ್ನೊಬ್ಬರು ಹಾಯಾಗಿರುವುದು ದಾಂಪತ್ಯವಲ್ಲ. ಹೊರಗಿನ ಹಾಗೂ ಒಳಗಿನ ಎರಡೂ ಕೆಲಸವನ್ನು ಹಂಚಿಕೊಂಡು ಖುಷಿ-ಖುಷಿಯಾಗಿ ಮಾಡಿದ್ರೆ ದಾಂಪತ್ಯ ಸರಿಯಾಗಿರುತ್ತದೆ.
ಮದುವೆ ನಂತ್ರ ವೈಯಕ್ತಿಕ ವಿಷ್ಯದಿಂದ ಹಿಡಿದು ಆರ್ಥಿಕ ವಿಷ್ಯದವರೆಗೆ ಎಲ್ಲವನ್ನೂ ಸಂಗಾತಿ ಮುಂದೆ ಹೇಳಿಕೊಳ್ಳಬೇಕು. ಸಂಗಾತಿಗೂ ಬ್ಯಾಂಕ್ ವ್ಯವಹಾರಗಳ ಬಗ್ಗೆ ತಿಳಿದಿರಬೇಕು. ಒಂದಾಗಿ ಹಣಕಾಸಿನ ವ್ಯವಹಾರ ನಡೆಸುವುದು, ಕೆಲವೊಂದು ಮಹತ್ವದ ವಿಷ್ಯವನ್ನು ಒಟ್ಟಿಗೆ ಕುಳಿತು ಚರ್ಚಿಸಿ ತೀರ್ಮಾನ ತೆಗೆದುಕೊಂಡಲ್ಲಿ ದಾಂಪತ್ಯ ಸುಖಮಯವಾಗಿರುತ್ತದೆ.