ಪಠಾಣ್ ಕೋಟ್- ಸಂಸದ ಸನ್ನಿ ಡಿಯೋಲ್ ನಾಪತ್ತೆಯಾಗಿದ್ದಾರೆ. ಹೀಗಂತ ರೈಲ್ವೇ ನಿಲ್ದಾಣ, ವಾಹನಗಳ ಮೇಲೆ ಪೋಸ್ಟರ್ ಅಂಟಿಸಲಾಗಿದೆ. ಈ ಪೋಸ್ಟರ್ ಹಾಕಿರುವವರು ಇಲ್ಲಿನ ಸ್ಥಳೀಯರು. ತಮ್ಮ ಸಂಸದರು ಕ್ಷೇತ್ರಕ್ಕೆ ಬರುತ್ತಿಲ್ಲ ಅಂತ ಇಲ್ಲಿನ ಸ್ಥಳೀಯರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಹೌದು, 2019 ರ ಲೋಕಸಭಾ ಚುನಾವಣೆಯಲ್ಲಿ ಗುರುದಾಸ್ಪುರ ಕ್ಷೇತ್ರದಿಂದ ಗೆದ್ದಿದ್ದ ಸನ್ನಿ ಡಿಯೋಲ್, ಗೆದ್ದ ನಂತರ ಕ್ಷೇತ್ರದ ಕಡೆ ತಲೆನೂ ಹಾಕಿಲ್ವಂತೆ. ಪಂಜಾಬ್ ಮಗ ಎಂದು ಹೇಳುವ ಸನ್ನಿ, ಈ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಸಂಸದರ ನಿಧಿ ಕೂಡ ಮಂಜೂರು ಮಾಡಿಲ್ಲ. ಅವರಿಗೆ ಕೆಲಸ ಮಾಡಲು ಇಷ್ಟ ಇಲ್ಲ ಅಂದರೆ ರಾಜಿನಾಮೆ ಕೊಡಲಿ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.
ಸದ್ಯ ಸನ್ನಿ ಡಿಯೋಲ್ ಬೆನ್ನು ನೋವಿನಿಂದ ಬಳಲುತ್ತಿದ್ದು ಯುಎಸ್ ಎ ನಲ್ಲಿ ಚಿಕಿತ್ಸೆ ಪಡಯುತ್ತಿದ್ದಾರೆ ಎನ್ನಲಾಗಿದೆ. ಚಿತ್ರೀಕರಣದ ವೇಳೆ ಬೆನ್ನುನೋವಿಗೆ ತುತ್ತಾಗಿದ್ದರಂತೆ. ಮೊದಲು ಮುಂಬೈ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಸದ ಇದೀಗ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಚಿಕಿತ್ಸೆ ಮುಗಿದು ಚೇತರಿಸಿಕೊಂಡ ಬಳಿಕ ದೇಶಕ್ಕೆ ವಾಪಸ್ಸಾಗಲಿದ್ದಾರಂತೆ.