ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲಿರುವ ಮೊರೆನಾದ ಚೌಸತ್ ಯೋಗಿನಿ ದೇವಾಲಯ ಶಿವನ ದೇಗುಲವಾಗಿದೆ. ಈ ಸ್ಥಳ ಇತ್ತೀಚೆಗೆ ಪ್ರಖ್ಯಾತಿ ಪಡೆದುಕೊಳ್ಳುತ್ತಿದ್ದು, ಈ ದೇವಾಲಯವನ್ನ ನೋಡಿಯೇ ನವದೆಹಲಿಯಲ್ಲಿರುವ ಈಗಿನ ಸಂಸತ್ ಭವನ ರಚಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾಗಿ ಇದು ಎಲ್ಲರ ಗಮನ ಸೆಳೆದಿದ್ದು, ಇದನ್ನ ಯುನೆಸ್ಕೋ ವಿಶ್ವ ಪಾರಂಪಾರಿಕ ತಾಣವನ್ನಾಗಿಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, 2015 ರಲ್ಲಿ ಪುರಾತತ್ವ ಇಲಾಖೆಯ ಪ್ರಾಂತೀಯ ನಿರ್ದೇಶಕ ಕೆ.ಕೆ. ಮಹಮ್ಮದ್ ಅವರ ನೇತೃತ್ವದಲ್ಲಿ ಈ ದೇವಸ್ಥಾನವನ್ನ ಪುನರ್ ಸ್ಥಾಪಿಸಲಾಯಿತು. ಮಹಮ್ಮದ್ ನಿವೃತ್ತಿ ಆದ ಮೇಲೆ ಈ ಕೆಲಸ ಮತ್ತೆ ನೆನೆಗುದಿಗೆ ಬಿದ್ದಿತು ಎನ್ನುತ್ತಾರೆ.
ಮಹಮ್ಮದ್ ರ ಹೇಳಿಕೆ ಪ್ರಕಾರ ಈ ದೇವಾಲಯ 1000 ವರ್ಷಗಳ ಹಿಂದೆ ಕಟ್ಟಲಾದ ದೇವಾಲಯವಾಗಿದೆ. ಇದು ಇರುವ ಊರು ಮಿತ್ವಾಲಿ ಮತ್ತು ಪದ್ವಾಲಿ ಎಂದು ಕರೆಯಲಾಗುತ್ತದೆ. ಈಗಿನ ಸಂಸತ್ ಭವನ ಕಟ್ಟಲು ಚೌಸಾತ್ ಯೋಗಿನಿ ದೇವಾಲಯದ ಸ್ಫೂರ್ತಿಯಿದೆ ಎನ್ನುತ್ತಾರೆ ಆ ನಿವೃತ್ತ ಅಧಿಕಾರಿ.
ಆದರೆ ಕೆಲವರ ಪ್ರಕಾರ ರಾಷ್ಟ್ರಪತಿ ಭವನ, ಸಂಸತ್ ಭವನ ಹಾಗೂ ರೈಸಾನ ಹಿಲ್ಸ್ ಗಳು ರೋಮನ್ ಶೈಲಿಯ ಕಟ್ಟಡವೆಂದು ಪ್ರತಿಪಾದಿಸಿದರೆ ಮತ್ತೆ ಕೆಲವರು ಈ ಕಟ್ಟಡಗಳನ್ನ ಭಾರತೀಯ ಮತ್ತು ಪಾಶ್ಚಾತ್ಯ ದೇಶಗಳ ಮಿಶ್ರಣದ ಶೈಲಿ ಎಂದು ಹೇಳುತ್ತಾರೆ.