ಪ್ರೀತಿ ಕುರುಡು. ಪ್ರೀತಿಯಲ್ಲಿ ಬಿದ್ದವರು ಜಗತ್ತನ್ನು ಮರೆಯುತ್ತಾರೆ ಎಂಬ ಮಾತಿದೆ. ಪ್ರೀತಿಯ ಅಲೆಯಲ್ಲಿ ತೇಲುತ್ತಿರುವವರಿಗೆ ಮುಂಬರುವ ಅಪಾಯಗಳು ಕಣ್ಣ ಮುಂದಿದ್ದರೂ ಕಾಣಿಸೋದಿಲ್ಲ. ನೀವೂ ಪ್ರೀತಿ ಮಾಡುತ್ತಿದ್ದು, ಸಂಬಂಧ ಮುಂದುವರೆಸುವ ಯೋಚನೆ ಮಾಡುತ್ತಿದ್ದರೆ ಕೆಲವೊಂದು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಂಡು ಉತ್ತರ ಕಂಡುಕೊಳ್ಳಿ.
ಇಬ್ಬರು ವ್ಯಕ್ತಿಗಳ ಆಲೋಚನೆ ಒಂದೇ ರೀತಿ ಇರೋದಿಲ್ಲ. ಆದ್ರೆ ಜೀವನದಲ್ಲಿ ಕೆಲವೊಂದು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಇಬ್ಬರ ನಿರ್ಧಾರಗಳೂ ಮಹತ್ವ ಪಡೆಯುತ್ತವೆ. ಶಿಕ್ಷಣ, ಕುಟುಂಬ, ಹಣಕಾಸಿನಂತ ವಿಚಾರದಲ್ಲಿ ಇಬ್ಬರ ಆಲೋಚನೆ ಬೇರೆಯಾಗಿದ್ದು, ಒಮ್ಮತ ಸಾಧ್ಯವಿಲ್ಲವೆಂದಾದಲ್ಲಿ ಇಬ್ಬರು ಸಂಬಂಧ ಮುಂದುವರೆಸುವ ಬದಲು ಕಡಿದುಕೊಳ್ಳುವುದು ಉತ್ತಮ.
ಪರಸ್ಪರ ಗೌರವ ನೀಡುವುದು ಬಹಳ ಮುಖ್ಯ. ಪರಸ್ಪರ ಗೌರವ ಸಿಕ್ಕಿಲ್ಲವೆಂದಾದ್ರೆ ಆ ಸಂಬಂಧ ತುಂಬಾ ಸಮಯ ಗಟ್ಟಿಯಾಗಿರುವುದಿಲ್ಲ.
ಸಣ್ಣ ಪುಟ್ಟ ಗಲಾಟೆ, ಜಗಳ ಮಾಮೂಲಿ. ಆದ್ರೆ ನೀವಿಬ್ಬರು ಒಟ್ಟಿಗೆ ಇರುವ ವೇಳೆ ಎಷ್ಟು ನಗ್ತಿರಾ ಎಂಬ ವಿಷಯ ಮಹತ್ವ ಪಡೆಯುತ್ತದೆ. ಇಬ್ಬರ ನಡುವೆ ಜಗಳಕ್ಕಿಂತ ನಗು ಜಾಸ್ತಿ ಇದ್ದಲ್ಲಿ ಆ ಸಂಬಂಧ ಬಹಳ ದಿನ ಮುಂದುವರೆಯುವುದರಲ್ಲಿ ಎರಡು ಮಾತಿಲ್ಲ.
ಇಬ್ಬರೂ ಮದುವೆಯಾಗಲು ಬಯಸಿದ್ದರೆ ಸಂಗಾತಿಯ ಕುಟುಂಬ ಹಾಗೂ ಸ್ನೇಹಿತರನ್ನು ನೀವು ಎಷ್ಟು ಗೌರವ, ಪ್ರೀತಿಯಿಂದ ಕಾಣ್ತೀರಿ ಎಂಬುದು ಮಹತ್ವ ಪಡೆಯುತ್ತದೆ. ಮದುವೆ ಇಬ್ಬರ ನಡುವೆ ನಡೆಯುವುದಲ್ಲ. ಎರಡು ಕುಟುಂಬಗಳನ್ನು ಬೆಸೆಯುವುದು. ಹಾಗಾಗಿ ಕುಟುಂಬಸ್ಥರ ಮೇಲೆ ಸಂಗಾತಿಗೆ ಗೌರವ, ಪ್ರೀತಿ ಇಲ್ಲವೆಂದಾದ್ರೆ ಮದುವೆ ಮಾತುಕತೆ ಬೇಡ.
ನಿಮ್ಮನ್ನು ಬದಲಾಯಿಸಲು ಬಯಸುವ ವ್ಯಕ್ತಿ ನಿಮಗೆ ಒಳ್ಳೆ ಸಂಗಾತಿಯಾಗಲು ಸಾಧ್ಯವೇ ಇಲ್ಲ. ನಿಮ್ಮನ್ನು ನೀವಿದ್ದಂತೆ ಸ್ವೀಕರಿಸಿದ್ರೆ ಮಾತ್ರ ಅದು ನಿಜವಾದ ಪ್ರೀತಿ. ನಿಮ್ಮ ಹವ್ಯಾಸವನ್ನು ಅವರು ಬದಲಾಯಿಸಲು ನೋಡಿದ್ರೆ ಇದೇ ವಿಚಾರ ನಿಮ್ಮಿಬ್ಬರ ನಡುವೆ ಜಗಳಕ್ಕೆ ಕಾರಣವಾಗುತ್ತದೆ. ಇದ್ರಿಂದ ಸಂಬಂಧ ಗಟ್ಟಿಯಾಗುವ ಬದಲು ಹಾಳಾಗುತ್ತದೆ.