ರಾಜಸ್ಥಾನದ ಉದಯ್ ಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಎಂಬವರನ್ನು ಮುಸ್ಲಿಂ ಮೂಲಭೂತವಾದಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಅಲ್ಲದೆ ತಮ್ಮ ಈ ಪೈಶಾಚಿಕ ಕೃತ್ಯದ ವಿಡಿಯೋವನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಮತ್ತೊಂದು ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೂ ಜೀವ ಬೆದರಿಕೆ ಹಾಕಿದ್ದರು.
ಇದೀಗ ಹತ್ಯೆ ಆರೋಪಿಗಳನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದು, ಪ್ರಕರಣವನ್ನು ಈಗ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ. ಇದರ ಮಧ್ಯೆ ಘಟನಾವಳಿಯ ಹಿಂದಿನ ಕಾರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದ ಕನ್ನಯ್ಯ ಲಾಲ್ ಅವರಿಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿದ್ದವು ಎನ್ನಲಾಗಿದೆ.
ಇದರಿಂದ ಆತಂಕಗೊಂಡಿದ್ದ ಅವರು ತಮ್ಮ ಅಂಗಡಿಗೂ ಹೋಗದೆ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು ಎನ್ನಲಾಗಿದೆ. ಆಗ ಪೊಲೀಸರು, ಸ್ಥಳೀಯ ಮುಸ್ಲಿಂ ಮುಖಂಡರು ಹಾಗೂ ಕನ್ನಯ್ಯ ಲಾಲ್ ಮತ್ತಾತನ ಸ್ನೇಹಿತರ ಜೊತೆ ಸಂಧಾನ ಸಭೆ ನಡೆಸಿದ್ದು, ಬೆದರಿಕೆಯನ್ನು ನಿಲ್ಲಿಸುವಂತೆ ಖಡಕ್ ಸೂಚನೆ ನೀಡಿದ್ದರು.
ಈ ವೇಳೆ ತಮಗೆ ಜೀವ ಬೆದರಿಕೆ ಇರುವ ಕುರಿತು ಕನ್ನಯ್ಯ ಲಾಲ್ ನೀಡಿರುವ ದೂರನ್ನು ಹಿಂಪಡೆಯುವಂತೆ ಮುಸ್ಲಿಂ ಮುಖಂಡರು ಬೇಡಿಕೆ ಇಟ್ಟಿದ್ದು, ಹೇಗೂ ಸಂಧಾನ ಆಗಿದೆ ಎಂಬ ಕಾರಣಕ್ಕೆ ಕನ್ನಯ್ಯ ಲಾಲ್ ಇದನ್ನು ಹಿಂಪಡೆದಿದ್ದರು ಎನ್ನಲಾಗಿದೆ.
ಈ ಸಂಧಾನ ಸಭೆ ನಡೆದ ಬಳಿಕ ವಾರದವರೆಗೆ ಕನ್ನಯ್ಯ ಲಾಲ್ ಅವರಿಗೆ ಯಾವುದೇ ಬೆದರಿಕೆ ಬಂದಿರಲಿಲ್ಲವೆನ್ನಲಾಗಿದ್ದು, ಹೀಗಾಗಿ ಇದೇ ವಿಶ್ವಾಸದಲ್ಲಿ ಅಲ್ಲಿಯವರೆಗೆ ಅಂಗಡಿ ಮುಚ್ಚಿದ್ದ ಕನ್ನಯ್ಯ ಲಾಲ್ ಮಂಗಳವಾರ ತೆರೆದಿದ್ದು, ಅಂದೇ ಬರ್ಬರವಾಗಿ ಹತ್ಯೆಯಾಗಿದ್ದಾರೆ.