ಸಂಜೆ ಸಮಯ ಏನಾದರೂ ಖಾರ ಖಾರವಾದ್ದು ತಿನ್ನಬೇಕು ಅನಿಸುತ್ತದೆ. ಹಾಗಾಗಿ ಸುಲಭವಾಗಿ ಮಾಡಿಕೊಂಡು ಸವಿಯುವ ವಡಾ ಪಾವ್ ರೆಸಿಪಿ ಇಲ್ಲಿದೆ. ಒಮ್ಮೆ ಟ್ರೈ ಮಾಡಿ ನೋಡಿ.
ಒಂದು ಬೌಲ್ ಗೆ 1 ಕಪ್ ಕಡಲೆಹಿಟ್ಟು ಹಾಕಿಕೊಳ್ಳಿ. ನಂತರ 1 ಟೀ ಸ್ಪೂನ್ ಉಪ್ಪು, ¾ ಟೀ ಸ್ಪೂನ್ ಖಾರದಪುಡಿ, ಚಿಟಿಕೆ ಅರಿಶಿನ 1 ಕಪ್ ನೀರು ಹಾಕಿ ಈ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಇದಕ್ಕೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ, 1 ಟೀ ಸ್ಪೂನ್ ಸಾಸಿವೆ ಹಾಕಿ ಅದು ಸಿಡಿಯುತ್ತಿದ್ದಂತೆ ಚಿಟಿಕೆ ಇಂಗು, 2 ಹಸಿಮೆಣಸು, ಕರಿಬೇವು, ಚಿಟಿಕೆ ಅರಿಶಿನ, 1 ½ ಕಪ್ ಬೇಯಿಸಿದ ಸ್ವಲ್ಪ ಮ್ಯಾಶ್ ಮಾಡಿಟ್ಟುಕೊಂಡ ಬಟಾಟೆ ಮಿಶ್ರಣವನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಉಪ್ಪು ಸೇರಿಸಿ. ಮತ್ತೊಮ್ಮೆ ಮಿಕ್ಸ್ ಮಾಡಿಕೊಳ್ಳಿ. ನಂತರ ಇದನ್ನು ತಣ್ಣಗಾಗುವುದಕ್ಕೆ ಬಿಟ್ಟುಬಿಡಿ.
ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ನಂತರ 10 ಎಸಳು ಬೆಳ್ಳುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ 1 ಟೇಬಲ್ ಸ್ಪೂನ್ ಶೇಂಗಾ ಬೀಜ ಹಾಕಿ ಫ್ರೈ ಮಾಡಿ. ನಂತರ 3 ಟೇಬಲ್ ಸ್ಪೂನ್ ಬಿಳಿ ಎಳ್ಳು ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ½ ಟೇಬಲ್ ಸ್ಪೂನ್ ಧನಿಯಾ ಪುಡಿ, 1 ಟೇಬಲ್ ಸ್ಪೂನ್ ಖಾರದ ಪುಡಿ, ½ ಕಪ್ ತೆಂಗಿನಕಾಯಿ ತುರಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಗ್ಯಾಸ್ ಮೇಲೆ ಇಟ್ಟು 1 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಒಂದು ಮಿಕ್ಸಿ ಜಾರಿನಲ್ಲಿ ಇದನ್ನು ಪುಡಿ ಮಾಡಿಕೊಳ್ಳಿ.
ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಮಾಡಿಟ್ಟುಕೊಂಡ ಆಲೂಗಡ್ಡೆ ಮಿಶ್ರಣದಿಂದ ಹದ ಗಾತ್ರದ ಉಂಡೆ ಮಾಡಿಕೊಂಡು ಕಡಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆ ಬಾಣಲೆಗೆ ಬಿಟ್ಟು ಕರಿದು ತೆಗೆಯಿರಿ.
ನಂತರ ಪಾವ್ ತೆಗೆದುಕೊಂಡು ಅದರ ಮಧ್ಯೆ ಭಾಗ ಕತ್ತರಿಸಿಕೊಂಡು ಅದರ ಮಧ್ಯ ಭಾಗಕ್ಕೆ ಮಾಡಿಟ್ಟುಕೊಂಡ ಚಟ್ನಿ ಪೌಡರ್ ಸ್ವಲ್ಪ ಹಾಕಿ ನಂತರ ವಡಾ ಇಟ್ಟು ಅದರ ಮೇಲುಗಡೆ ಸ್ವಲ್ಪ ಚಟ್ನಿ ಪುಡಿ ಹಾಕಿದರೆ ರುಚಿಕರವಾದ ವಡಾ ಪಾವ್ ಸವಿಯಲು ಸಿದ್ಧ.