ದಾಖಲೆ ಪತ್ರಗಳ ಪರಿಶೀಲನೆ ನೆಪದಲ್ಲಿ ಅನಗತ್ಯವಾಗಿ ವಾಹನ ಸವಾರರನ್ನು ತಡೆದು ನಿಲ್ಲಿಸುವಂತಿಲ್ಲ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಮಾತ್ರ ಅಂತಹ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಕಟ್ಟುನಿಟ್ಟಾದ ಸೂಚನೆ ನೀಡಿದ್ದರು.
ಇಷ್ಟಾದರೂ ಕೂಡ ಕೆಲ ಪೊಲೀಸ್ ಸಿಬ್ಬಂದಿ ವಾಹನ ಸವಾರರನ್ನು ತಡೆದು ಕಿರುಕುಳ ನೀಡಿದ ಪ್ರಕರಣಗಳು ವರದಿಯಾಗಿತ್ತು. ಹೀಗಾಗಿ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಸಾರ್ವಜನಿಕರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಇದೀಗ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ, ದಾಖಲೆ ಪರಿಶೀಲನೆ ನೆಪದಲ್ಲಿ ಅನಗತ್ಯವಾಗಿ ವಾಹನ ಸವಾರರನ್ನು ತಡೆದು ತೊಂದರೆ ನೀಡಿದರೆ ಅಂತಹ ಪೊಲೀಸ್ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ, ಪೊಲೀಸ್ ಮಹಾನಿರ್ದೇಶಕರ ಸುತ್ತೋಲೆಯ ಕಟ್ಟುನಿಟ್ಟಿನ ಆದೇಶ ಪಾಲನೆ ಕುರಿತು ಡಿಸಿಪಿಗಳು, ಆಯಾ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಕ್ತ ತಿಳುವಳಿಕೆ ನೀಡುವಂತೆ ರವಿಕಾಂತೇಗೌಡ ಸೂಚಿಸಿದ್ದಾರೆ.