
ದಾಂಪತ್ಯದಲ್ಲಿ ಮುಚ್ಚುಮರೆ ಇರಬಾರದು. ಪ್ರೀತಿಯಿರಲಿ, ನೋವಿರಲಿ ಯಾವುದೇ ವಿಚಾರವಿರಲಿ ಸಂಗಾತಿಗೆ ಹೇಳುವುದು ಸೂಕ್ತ. ಮೊದಲ ಪ್ರೀತಿಯೇ ನಿಮ್ಮ ಕೊನೆಯ ಪ್ರೀತಿಯಾಗಿರಬೇಕೆಂಬ ನಿಯಮವೇನಿಲ್ಲ. ಹಳೆಯದನ್ನು ಮರೆತು ಹೊಸ ಬಾಳಿಗೆ ಕಾಲಿಟ್ಟ ನಿಮ್ಮ ಬೆನ್ನಿಗೆ ಈ ಸಂಬಂಧದ ಕಲೆ ಇದ್ದೇ ಇರುತ್ತದೆ.
ಈ ವಿಷಯ ನಿಮ್ಮ ಸಂಗಾತಿಗೆ ಬೇರೆಯವರಿಂದ ತಿಳಿಯುವ ಬದಲು ನೀವೇ ಸಮಯ ನೋಡಿ ಅವರ ಮುಂದೆ ಹಳೆ ಪ್ರೀತಿಯ ಬಗ್ಗೆ ಹೇಳುವುದು ಅತ್ಯುತ್ತಮ.
ಮೊದಲ ಭೇಟಿಯಲ್ಲಿ ಹಳೆ ಸಂಗಾತಿ, ಹಳೆ ನೋವಿನ ಬಗ್ಗೆ ಹೇಳುವ ತಪ್ಪು ಮಾಡಬೇಡಿ. ಇದ್ರಿಂದ ವಿಶ್ವಾಸ ಮೂಡುವ ಮೊದಲೇ ಸಂಬಂಧ ಹಳಸಿ ಹೋಗುತ್ತದೆ ಎಂಬುದು ನೆನಪಿರಲಿ. ಪರಸ್ಪರ ನಂಬಿಕೆ, ವಿಶ್ವಾಸ ಮೂಡಿ, ಒಬ್ಬರನ್ನೊಬ್ಬರು ಸ್ವಲ್ಪ ಮಟ್ಟಿಗೆ ಅರ್ಥ ಮಾಡಿಕೊಳ್ಳಲು ಸಮಯ ನೀಡಿ.
ಕಾಲೇಜು ದಿನಗಳ, ಸ್ನೇಹಿತರ ಸುದ್ದಿಯ ನಡುವೆ ಈ ವಿಷ್ಯವನ್ನು ತೂರಿಸಿ ನನ್ನದೂ ಒಂದು ಪ್ರೇಮ ಕಥೆ ಇತ್ತು ಎಂಬುದನ್ನು ನಿಮ್ಮ ಸಂಗಾತಿ ಕಿವಿಗೆ ಮುಟ್ಟಿಸಬಹುದು.
ಇಬ್ಬರೂ ರೋಮ್ಯಾಂಟಿಕ್ ಸಿನಿಮಾ ನೋಡ್ತಿರುತ್ತೀರಾ, ಅಲ್ಲಿ ಪ್ರೀತಿ, ಬ್ರೇಕ್ ಅಪ್ ನಂತ ದೃಶ್ಯಗಳು ಬಂದಾಗ ನೀವು ನಿಮ್ಮ ಜೀವನದಲ್ಲಿ ನಡೆದ ವಿಷಯವನ್ನು ಹೇಳಬಹುದು.
ವಿಷಯ ಎಷ್ಟು ಸರಳವಾಗಿಯೇ ಇರಲಿ, ನಿಮ್ಮ ಸಂಗಾತಿಯ ಮೂಡ್ ನೋಡಿ ಮಾತನಾಡಿ. ಬೇರೆ ಯಾವುದೋ ಕಾರಣಕ್ಕೆ ಮೂಡ್ ಸರಿಯಿಲ್ಲವೆಂದಾಗ ನೀವು ಈ ವಿಷಯ ಹೇಳಿದ್ರೆ ಮೂಡ್ ಮತ್ತಷ್ಟು ಹಾಳಾಗಿ ಯಡವಟ್ಟಾಗುವ ಸಾಧ್ಯತೆ ಇದೆ.
ಪತ್ರದ ರೂಪದಲ್ಲಿ ನಿಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ವಿವರವಾಗಿ ಬರೆದು ನಿಮ್ಮ ಪತ್ನಿಗೆ ನೀಡುವ ಅವಕಾಶವೂ ಇದೆ. ಯಾವುದೇ ವಿಧಾನವಿರಲಿ ಕೊನೆಯಲ್ಲಿ ಅವರನ್ನು ಮರೆತು ನಿನ್ನೊಂದಿಗೆ ಸುಖವಾಗಿದ್ದೇನೆ ಎಂಬುದನ್ನು ಹೇಳಲು ಮಾತ್ರ ಮರೆಯಬೇಡಿ.