ಪ್ರೀತಿ ಮತ್ತು ವಿಶ್ವಾಸವಿಲ್ಲದಿದ್ದರೆ ಯಾವುದೇ ಸಂಬಂಧವೂ ಅಪೂರ್ಣವೆನಿಸುತ್ತದೆ. ಕಾಲಾನಂತರದಲ್ಲಿ ಪರಸ್ಪರ ತಿಳುವಳಿಕೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ದಂಪತಿಗಳು ಸುಳ್ಳುಹೇಳುವುದು, ವಿಷಯವನ್ನು ಮರೆಮಾಚುವುದು ಹೀಗೆ ಅನೇಕ ರೀತಿಯ ತಪ್ಪುಗಳನ್ನು ಮಾಡಲಾರಂಭಿಸುತ್ತಾರೆ.
ಸಂಗಾತಿ ಏನನ್ನಾದರೂ ನಿಮ್ಮಿಂದ ಮರೆಮಾಚುತ್ತಿದ್ದಾರೆ ಎಂಬ ಭಾವನೆ ನಿಮ್ಮಲ್ಲಿ ಮೂಡಿದರೆ ನಿಜಕ್ಕೂ ಅದು ಕಳವಳಕಾರಿ ಸಂಗತಿ. ಸುಳ್ಳು ಹೇಳುವ ಈ ಅಭ್ಯಾಸ ಸಂಬಂಧವನ್ನೇ ಹಾಳುಮಾಡಿಬಿಡಬಹುದು. ಹಾಗಾಗಿ ಸಂಗಾತಿ ಸುಳ್ಳು ಹೇಳದಂತೆ ಮಾಡುವುದು ಹೇಗೆ? ಸಂಬಂಧವನ್ನು ಬಲಪಡಿಸಲು ಏನು ಮಾಡಬೇಕು ಎಂಬುದನ್ನೆಲ್ಲ ನೋಡೋಣ.
ಸಂಬಂಧ ಬಲಪಡಿಸುವ ಮಾರ್ಗಗಳು…
ಕೋಪ ಬೇಡ – ಸಂಗಾತಿ ನಿಮಗೆ ಏನಾದರೂ ಹೇಳಿದರೆ ಕೋಪಗೊಳ್ಳಬೇಡಿ. ಸಮಾಧಾನದಿಂದ ಅದನ್ನು ಕೇಳಿಸಿಕೊಳ್ಳಿ. ಏಕೆಂದರೆ ಅನೇಕ ಬಾರಿ ನೀವು ಸಿಟ್ಟು ಮಾಡಿಕೊಳ್ಳುತ್ತೀರಿ ಎಂಬ ಕಾರಣಕ್ಕೆ ನಿಮ್ಮ ಪತಿ ಅಥವಾ ಪತ್ನಿ ಕೆಲವು ವಿಷಯಗಳನ್ನು ನಿಮ್ಮಿಂದ ಮರೆಮಾಚಬಹುದು. ನಿಮ್ಮ ಸಮಾಧಾನಕ್ಕಾಗಿ ಅವರು ಸುಳ್ಳು ಹೇಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಂಗಾತಿಯೊಂದಿಗೆ ಪ್ರೀತಿಯಿಂದ ಮಾತನಾಡಿ.
ಎಲ್ಲವನ್ನೂ ಪರಸ್ಪರ ಹೇಳಿಕೊಳ್ಳಿ – ಸಂಬಂಧದಲ್ಲಿ ಪತಿ-ಪತ್ನಿ ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಾರೆ. ಈ ಅಭ್ಯಾಸವು ಅವರ ನಡುವೆ ನಂಬಿಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇದು ಕಾಲಾನಂತರದಲ್ಲಿ ಬದಲಾಗಲು ಪ್ರಾರಂಭಿಸಿದರೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಪರಸ್ಪರರ ನಡುವಿನ ನಂಬಿಕೆ, ವಿಶ್ವಾಸವನ್ನು ಪುನರ್‌ಸ್ಥಾಪಿಸಬೇಕು. ಇದಕ್ಕಾಗಿ ಎಲ್ಲವನ್ನೂ ಹಂಚಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.
ಒಟ್ಟಿಗೆ ಇರುವ ಭರವಸೆ ನೀಡಿ – ದಂಪತಿಗಳು ಯಾವಾಗಲೂ ಒಬ್ಬರನ್ನೊಬ್ಬರು ಬೆಂಬಲಿಸುತ್ತಾರೆ. ಜಗತ್ತಿನಲ್ಲಿ ಎಲ್ಲರಿಗಿಂತ ಮೊದಲು ನಿನ್ನನ್ನೇ ನಂಬುತ್ತೇನೆ ಎಂಬ ಭರವನೆಯನ್ನು ಸಂಗಾತಿಗೆ ನೀಡಬೇಕು. ಆಗ ಮಾತ್ರ ಸಂಗಾತಿಯು ನಿಮ್ಮೊಂದಿಗೆ ಪ್ರತಿ ಸನ್ನಿವೇಶದಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ ಮತ್ತು ಅವರ ರಹಸ್ಯವನ್ನು ಸುರಕ್ಷಿತವೆಂದು ಪರಿಗಣಿಸುತ್ತಾರೆ.
ಪ್ರೀತಿಯ ಭರವಸೆ – ಸಂಗಾತಿಯ ಮೇಲೆ ಕೋಪ ಬರುವುದು ಸಹಜ. ಆದರೆ ಎಷ್ಟೇ ಕೋಪಗೊಂಡರೂ ನೀವು ಅವನನ್ನು ಅಥವಾ ಅವಳನ್ನೇ ಹೆಚ್ಚು ಪ್ರೀತಿಸುತ್ತೀರಿ ಎಂದು ಯಾವಾಗಲೂ ಭರವಸೆ ನೀಡಿ. ಈ ವಾಗ್ದಾನವು ಎಂದಿಗೂ ತಪ್ಪು ಮಾಡದಂತೆ ತಡೆಯುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಸಂಗಾತಿ ನಿಮ್ಮನ್ನು ನಂಬುತ್ತಾರೆ.