ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹಿಂದೂ ಏಕತಾ ಮಂಚ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಬೇಟಿ ಬಚಾವೋ ಮಹಾಪಂಚಾಯತ್’ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬಳು ತನ್ನ ಅಳಲು ಹೇಳಿಕೊಳ್ಳಲು ಬಿಡದ್ದಕ್ಕೆ ರಾಜಕೀಯ ನಾಯಕನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಬಾರಿಸಿದ್ದಾಳೆ.
ಈ ಮಹಿಳೆಯ ಪುತ್ರಿ, ಕಾರ್ಯಕ್ರಮ ಏರ್ಪಡಿಸಿದ್ದ ರಾಜಕೀಯ ನಾಯಕನ ಪುತ್ರನನ್ನು ಪ್ರೀತಿಸಿ ಮದುವೆಯಾಗಿದ್ದಳು ಎನ್ನಲಾಗಿದ್ದು, ಆದರೆ ಆಕೆಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ. ಇದರಿಂದ ಬೇಸತ್ತ ಮಹಿಳೆ, ಮಗಳೊಂದಿಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಹೀಗಾಗಿ ‘ಬೇಟಿ ಬಚಾವೋ ಮಹಾ ಪಂಚಾಯತ್’ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆ ಆಯೋಜಕನಾಗಿದ್ದ ಮುಖಂಡನಿಂದ ತನ್ನ ಮಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ವಿವರಿಸಲು ಮುಂದಾಗಿದ್ದಾಳೆ. ಆದರೆ ಇದಕ್ಕೆ ಆತ ತಡೆಯೊಡ್ಡಿದ್ದು ಆಕ್ರೋಶಗೊಂಡ ಮಹಿಳೆ ಚಪ್ಪಲಿ ತೆಗೆದು ಹೊಡೆದಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.