ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ್ ಫಾಲ್ಸ್ ನಲ್ಲಿ ಪ್ರಸಿದ್ಧ ವಡನಬೈಲು ಪದ್ಮಾವತಿ ದೇವಾಲಯವಿದೆ. ಈ ದೇವಾಲಯ ಕರ್ನಾಟಕ ವಿದ್ಯುತ್ ನಿಗಮದ ಯೋಜನಾ ಪ್ರದೇಶದ ನಿರ್ಬಂಧಿತ ಪ್ರದೇಶದಲ್ಲಿರುವ ಕಾರಣ ಭಕ್ತರು ಅಲ್ಲಿಗೆ ತೆರಳಲು ಭದ್ರತಾ ಕಚೇರಿಯಿಂದ ಅನುಮತಿ ಪಡೆಯಬೇಕಿತ್ತು.
ಇದಕ್ಕಾಗಿ ಭಕ್ತಾದಿಗಳು ಭದ್ರತಾ ಕಚೇರಿಗೆ ತೆರಳಿ ಅಲ್ಲಿ ಕರ್ನಾಟಕ ವಿದ್ಯುತ್ ನಿಗಮ ನೀಡುವ ಮುದ್ರಿತ ಅರ್ಜಿ ಫಾರಂನಲ್ಲಿ ಪ್ರತಿ ಭಕ್ತರ ಹೆಸರು, ವಯಸ್ಸು, ವಿಳಾಸ, ವಾಹನ ಸಂಖ್ಯೆ ಮೊದಲಾದ ವಿವರಗಳನ್ನು ನೀಡಬೇಕಾಗಿತ್ತು. ಬಳಿಕವಷ್ಟೇ ಅನುಮತಿ ನೀಡಲಾಗುತ್ತಿತ್ತು.
ಇದೀಗ ಭದ್ರತಾ ವಿಭಾಗ ಪಾಸ್ ವಿತರಣೆಯನ್ನು ಸರಳೀಕರಣಗೊಳಿಸಿದ್ದು ಇನ್ನು ಮುಂದೆ ಭಕ್ತರು ಕಚೇರಿಗೆ ತೆರಳದೆ ನೇರವಾಗಿ ತಪಾಸಣಾ ಕೇಂದ್ರದಲ್ಲಿ ತಮ್ಮಲ್ಲಿರುವ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ವಾಹನ ಸಂಖ್ಯೆ ಮತ್ತು ವಾಹನದಲ್ಲಿ ಇರುವವರ ಸಂಖ್ಯೆಯನ್ನು ರಿಜಿಸ್ಟರಿನಲ್ಲಿ ದಾಖಲಿಸುವ ಮೂಲಕ ನೇರವಾಗಿ ದೇವಾಲಯಕ್ಕೆ ತೆರಳಬಹುದಾಗಿದೆ.