ಶ್ರೀಶೈಲಂ: ಆಂಧ್ರಪ್ರದೇಶದ ಕರ್ನೂಲು ಶ್ರೀಶೈಲಂ ಯಾತ್ರಾ ಸ್ಥಳದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಬಾಟಲ್ ನಲ್ಲಿ ನೀರು ತುಂಬಿಕೊಳ್ಳುವ ವಿಚಾರವಾಗಿ ಹೋಟೆಲ್ ನಲ್ಲಿ ಆಂಧ್ರದ ಸ್ಥಳೀಯರು ಹಾಗೂ ಕನ್ನಡಿಗರ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಯುವಕನೊಬ್ಬನಿಗೆ ಚಾಕು ಇರಿಯಲಾಗಿದೆ ಎಂದು ಹೇಳಲಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಸ್ಥಳೀಯರು ಹಾಗೂ ಕನ್ನಡಿಗರ ನಡುವೆ ಆರಂಭವಾದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಯಾತ್ರಾಸ್ಥಳದಲ್ಲಿ ನಿಂತಿದ್ದ ನೂರಾರು ವಾಹನಗಳನ್ನು ಜಖಂಗೊಳಿಸಲಾಗಿದೆ.
ಕರ್ನಾಟಕದ ಹಲವು ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ಸಂಘರ್ಷದಲ್ಲಿ ಬಾಗಲಕೋಟೆ ಮೂಲದ ಯುವಕ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗೃತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು ಕಟ್ಟೆಚ್ಚರ ವಹಿಸಿದ್ದಾರೆ.