ಆರ್ಥಿಕ ಸಂಕಷ್ಟದಿಂದ ನಲುಗಿರುವ ಶ್ರೀಲಂಕಾದಲ್ಲಿ ರೊಚ್ಚಿಗೆದ್ದಿರುವ ಜನ ಅಲ್ಲಿನ ಅಧ್ಯಕ್ಷ ಗೊಟಬಯ ರಾಜಪಕ್ಸ ನಿವಾಸವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿರುವ ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದು, ಇದರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದರ ಮಧ್ಯೆ ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರತಿಭಟನಾಕಾರರು ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆ ನೀಡುವವರೆಗೂ ತಾವು ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರ ಮಧ್ಯೆ ಅಜ್ಞಾತ ಸ್ಥಳದಲ್ಲಿ ಅಡಗಿರುವ ಗೊಟಬಯ ಅಲ್ಲಿಂದಲೇ ಅಡುಗೆ ಅನಿಲ ಹಂಚಿಕೆಗೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷರ ನಿವಾಸವನ್ನು ವಶಪಡಿಸಿಕೊಂಡ ವೇಳೆ ಅಲ್ಲಿ ಕೋಟ್ಯಾಂತರ ರೂಪಾಯಿ ನಗದು ದೊರೆತಿದೆ ಎಂದು ಹೇಳಲಾಗಿದ್ದು, ಇದನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದೆ. ಗೊಟಬಯ ರಾಜಪಕ್ಸೆ ನಿವಾಸದ ವೈಭೋಗವನ್ನು ಕಂಡು ಜನಸಾಮಾನ್ಯರು ಬೆರಗಾಗಿದ್ದು, ಅಲ್ಲಿನ ಸ್ವಿಮ್ಮಿಂಗ್ ಪೂಲ್, ಜಿಮ್ ಗಳನ್ನು ಈಗ ಬಳಸಿಕೊಳ್ಳುತ್ತಿದ್ದಾರೆ. ಅಧ್ಯಕ್ಷರ ರಾಜೀನಾಮೆ ಬಳಿಕವಷ್ಟೆ ಇವರುಗಳು ಅಲ್ಲಿಂದ ತೆರಳುವ ಸಾಧ್ಯತೆ ಇದೆ.