ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಮಿತಿಮೀರಿದ್ದು ರಾಜಕೀಯ ಹೈಡ್ರಾಮಾ ದಿನಕ್ಕೊಂದು ತಿರುವು ಪಡೆಯುತ್ತಿದೆ. ಶ್ರೀಲಂಕಾದಲ್ಲಿ ಕಳೆದ 70 ವರ್ಷಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಲಕ್ಷಾಂತರ ನಿವಾಸಿಗಳು ಆಹಾರ, ಔಷಧಿ, ಇಂಧನ ಹಾಗೂ ಇತರೆ ಅಗತ್ಯ ವಸ್ತುಗಳ ಮೂಲಭೂತ ಅವಶ್ಯಕತೆಗಳಿಗಾಗಿ ಹೆಣಗಾಡುತ್ತಿದ್ದಾರೆ. ಗಗನಕ್ಕೇರುತ್ತಿರುವ ಹಣದುಬ್ಬರವು ಶ್ರೀಲಂಕಾದ ಸ್ಥಿತಿಯನ್ನು ಕಾವೇರಿಸಿದೆ.
ಆಕ್ರೋಶಗೊಂಡ ಪ್ರತಿಭಟನಾಕಾರರು ಈಗಾಗಲೇ ಶ್ರೀಲಂಕಾ ಅಧ್ಯಕ್ಷರ ನಿವಾಸದಲ್ಲಿ ದಾಂಧಲೆಯನ್ನೇ ಮಾಡಿದ್ದಾರೆ. ಈ ಎಲ್ಲದರ ನಡುವೆ ಕೊಲಂಬೊದ ಅಧ್ಯಕ್ಷರ ಭವನದಲ್ಲಿ ಮಹಿಳೆಯೊಬ್ಬಳು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು ಈ ಫೋಟೋಗಳು ವೈರಲ್ ಆಗಿವೆ. ಮಧುಹಂಸಿ ಹಸಿಂತಾರಾ ಎಂಬ ಮಹಿಳೆಯು ಲಾನ್ ಪ್ರದೇಶದಲ್ಲಿ ಹಾಗೂ ಕಾರಿನ ಮುಂಭಾಗದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಮಧುಹಂಸಿ ಹಸಿಂತಾರಾ 26 ಫೋಟೋಗಳನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅರಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಸೋಫಾ, ಹಾಸಿಗೆಗಳ ಮೇಲೆ, ಹುಲ್ಲುಹಾಸಿನ ಮೇಲೆ ಹಾಗೂ ಕಾರಿನ ಬಳಿ ನಿಂತು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಎಲ್ಲಾ ಫೋಟೋಗಳಿಗೆ ಹೃದಯ ಎಮೋಜಿಯನ್ನು ಶೀರ್ಷಿಕೆಯಾಗಿ ಹಾಕಿದ್ದಾರೆ.
ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು 20 ಸಾವಿರಕ್ಕೂ ಅಧಿಕ ಲೈಕ್ಸ್ ಸಂಪಾದಿಸಿದೆ. ಕಮೆಂಟ್ನಲ್ಲಿ ಅನೇಕರು ಮಧುಹಂಸಿಯನ್ನು ರಾಣಿ ಎಂದು ಕರೆದಿದ್ದಾರೆ.