ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಕಳೆದ ಏಳು ದಶಕಗಳಲ್ಲೇ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸ್ತಾ ಇದೆ. ದ್ವೀಪ ರಾಷ್ಟ್ರದಲ್ಲಿ ಇಂಧನ ಕೊರತೆ ಮತ್ತಷ್ಟು ಹೆಚ್ಚಾಗಿದೆ. ಪೆಟ್ರೋಲ್‌ಗಾಗಿ ಜನರು ಸರತಿ ಸಾಲಿನಲ್ಲಿ ನಿಂತು ಕಾಯುವಂತಾಗಿದೆ. ಪೆಟ್ರೋಲ್, ಡೀಸೆಲ್ ವಿತರಣೆಗಾಗಿ ಸೈನಿಕರು ಸಾರ್ವಜನಿಕರಿಗೆ ಟೋಕನ್‌ಗಳನ್ನು ಹಸ್ತಾಂತರಿಸಿದ್ದಾರೆ.
ಇನ್ನೊಂದೆಡೆ ಇಂಧನ ಕೊರತೆ ಹಿನ್ನೆಲೆಯಲ್ಲಿ ಲಂಕಾದಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಎಲ್ಲರೂ ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಇನ್ನು ಕೆಲವರಿಗೆ ಮನೆಗೆ ಪ್ರಯಾಣಿಸಲು ಕೂಡ ಪೆಟ್ರೋಲ್ ಸಿಗುತ್ತಿಲ್ಲ. ಹಾಗಾಗಿ ಮನೆಗೂ ತೆರಳದೇ ಅಲ್ಲಲ್ಲೇ ಉಳಿದುಕೊಳ್ಳುತ್ತಿದ್ದಾರೆ.
ಶ್ರೀಲಂಕಾದಲ್ಲಿ ಸದ್ಯ ಕೇವಲ 9,000 ಟನ್ ಡೀಸೆಲ್ ಮತ್ತು 6,000 ಟನ್ ಪೆಟ್ರೋಲ್ ದಾಸ್ತಾನು ಇದೆ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಶೇಖರ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವರ್ಕ್ ಫ್ರಮ್ ಹೋಮ್ ಮಾಡುವಂತೆ ಸರ್ಕಾರವು ಉದ್ಯೋಗಿಗಳಿಗೆ ಸೂಚಿಸಿದೆ. ಕೊಲಂಬೊ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಲೆಗಳನ್ನು ಒಂದು ವಾರದವರೆಗೆ ಮುಚ್ಚಲಾಗಿದೆ.
ಕಳೆದೊಂದು ವಾರದಿಂದೀಚೆಗಂತೂ ಪೆಟ್ರೋಲ್ ಬಂಕ್‌ಗಳಲ್ಲಿ ಜನರ ಸರತಿ ಸಾಲು ಹೆಚ್ಚುತ್ತಲೇ ಇದೆ. ದಿನಗಟ್ಟಲೆ ಕಾದರೂ ಲೀಟರ್ ಪೆಟ್ರೋಲ್ ಸಿಗದೇ ಜನರು ಕಂಗೆಟ್ಟಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ತಂಡವೊಂದು 3 ಬಿಲಿಯನ್ ಡಾಲರ್ ನೆರವು ನೀಡುವ ಬಗ್ಗೆ ಮಾತುಕತೆ ನಡೆಸಲು ಶ್ರೀಲಂಕಾಕ್ಕೆ ಭೇಟಿ ನೀಡುತ್ತಿದೆ. ಅದೇನೇ ಆದ್ರೂ ತಕ್ಷಣಕ್ಕೆ ಶ್ರೀಲಂಕಾದ ಜನತೆಗೆ ರಿಲೀಫ್ ಸಿಗುತ್ತಿಲ್ಲ.