
ನೀತಾ ಅಂಬಾನಿ ಸರ್ವಗುಣ ಸಂಪನ್ನೆ ಅಂದ್ರೂ ತಪ್ಪೇನಿಲ್ಲ. ಭಾರತದ ಅತ್ಯಂತ ಶ್ರೀಮಂತ ಉದ್ಯಮಿಯೊಬ್ಬರ ಪತ್ನಿಯಾಗಿರೋ ನೀತಾ ಅಂಬಾನಿ ಅವರಲ್ಲಿ ಸಾಕಷ್ಟು ಸದ್ಗುಣಗಳಿವೆ. ಅವರೊಬ್ಬ ಪ್ರೀತಿಯ ಹೆಂಡತಿ, ಕಾಳಜಿಯುಳ್ಳ ಸೊಸೆ, ಕೈ ಹಿಡಿವ ತಾಯಿ ಮತ್ತು ಮುದ್ದು ಮೊಮ್ಮಗುವಿಗೆ ಪ್ರೀತಿಯ ಅಜ್ಜಿ.
ಉದ್ಯಮಿ ಮುಖೇಶ್ ಅಂಬಾನಿ ಅವರಿಗೆ ಹೆಗಲಾಗಿದ್ದಾರೆ ನೀತಾ. ಮುಖೇಶ್ ಅಂಬಾನಿಯವರ ವ್ಯಾಪಾರ, ವಹಿವಾಟಿನಲ್ಲೂ ನೀತಾ ಅಂಬಾನಿ ಅವರ ಸಹಕಾರ ಇದ್ದೇ ಇದೆ. ಮಗ ಅನಂತ್ ಅಂಬಾನಿಯ ತೂಕ ಇಳಿಕೆ ಪ್ರಯತ್ನದಲ್ಲೂ ನೀತಾರ ಸಹಕಾರವಿತ್ತು. ಮಕ್ಕಳ ಅದ್ಧೂರಿ ವಿವಾಹ ಆಯೋಜನೆ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವಿಕೆ ಹೀಗೆ ಸಾಕಷ್ಟು ಆಕ್ಟಿವ್ ಆಗಿದ್ದಾರೆ ನೀತಾ ಅಂಬಾನಿ.

ಮುಖೇಶ್ ಅಂಬಾನಿ ಅವರನ್ನು ವಿವಾಹವಾದಾಗ ನೀತಾ ದಲಾಲ್‌ಗೆ ಕೇವಲ 20 ವರ್ಷ. ಮುಖೇಶ್, ನೀತಾಗೆ ಸಿನಿಮಾ ರೀತಿಯಲ್ಲಿ ಪ್ರಪೋಸ್ ಮಾಡಿದ್ದರಂತೆ. ಜನನಿಬಿಡ ಪೆದ್ದಾರ್ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದಾಗ ಮುಖೇಶ್, ನೀತಾಗೆ ತಮ್ಮನ್ನು ಮದುವೆಯಾಗುವಂತೆ ಕೇಳಿದ್ದರು. ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದ ನೀತಾ ಒಂದು ಷರತ್ತು ವಿಧಿಸಿದ್ದರು. ಮದುವೆ ನಂತರವೂ ತಾನು ಕೆಲಸ ಮುಂದುವರಿಸುತ್ತೇನೆ ಎಂಬುದು ನೀತಾ ಹಾಕಿದ್ದ ಷರತ್ತು. ಇದಕ್ಕೆ ಮುಖೇಶ್ ಕೂಡ ಒಪ್ಪಿದ್ದರು.

ಮುಂಬೈನಲ್ಲಿ ಮಧ್ಯಮ ವರ್ಗದ ಗುಜರಾತಿ ಕುಟುಂಬದಲ್ಲಿ ಜನಿಸಿದ ನೀತಾ, ವಾಣಿಜ್ಯ ಪದವೀಧರೆ. ಭರತನಾಟ್ಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಚಿಕ್ಕ ವಯಸ್ಸಿನಿಂದಲೇ ನೃತ್ಯ ಪ್ರಕಾರವನ್ನು ಕಲಿಯಲು ಪ್ರಾರಂಭಿಸಿದರು. ವೃತ್ತಿಪರ ಭರತನಾಟ್ಯ ಪ್ರವೀಣೆಯಾದರು. ಪದವಿ ಮುಗಿದ ನಂತರ ನೀತಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದರು.
ಕಾರ್ಯಕ್ರಮವೊಂದರಲ್ಲಿ ನೀತಾರ ಭರತನಾಟ್ಯ ಪ್ರದರ್ಶನ ನೋಡಿದ ಧೀರೂಭಾಯಿ ಅಂಬಾನಿ, ಮಗ ಮುಖೇಶ್‌ಗೆ ಪತ್ನಿಯಾಗಿ ನೀತಾರನ್ನು ತರಬೇಕೆಂದು ಆಶಿಸಿದರು. ಮುಕೇಶ್ ಅಂಬಾನಿ ಜೊತೆಗೆ ವಿವಾಹದ ನಂತರ, ನೀತಾ ಅಂಬಾನಿ ಸೇಂಟ್ ಫ್ಲವರ್ ನರ್ಸರಿ ಎಂಬ ಶಾಲೆಯಲ್ಲಿ ಪಾಠ ಮಾಡುತ್ತಿದ್ದರು. ಆಗ ಆಕೆಗೆ ಸಿಗುತ್ತಿದ್ದುದು ತಿಂಗಳಿಗೆ 800 ರೂಪಾಯಿ ಸಂಬಳ.

ಇಷ್ಟು ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ಯ ಉದ್ಯಮಿಗಳ ಮನೆಯ ಸೊಸೆಯನ್ನು ನೋಡಿ ಜನರು ಆಡಿಕೊಂಡು ನಕ್ಕಿದ್ದರಂತೆ. ಆದ್ರೆ ನೀತಾಗೆ ತಮ್ಮ ಕೆಲಸದಲ್ಲಿ ತೃಪ್ತಿಯಿತ್ತು. ನೀತಾ ಸಂಬಳವನ್ನು ಮುಖೇಶ್ ಅಂಬಾನಿ ಕೈಯ್ಯಲ್ಲಿಡುತ್ತಿದ್ದರು. ಆ ಹಣವನ್ನು ಮನೆಯಲ್ಲಿ ಡಿನ್ನರ್ ಆಯೋಜನೆಗೆ ಬಳಸಲಾಗುತ್ತಿತ್ತಂತೆ.
ಕೆಲವು ವರ್ಷಗಳ ನಂತರ ನೀತಾ ಅಂಬಾನಿ ತಮ್ಮ ಪತಿ ಮುಖೇಶ್ ಅಂಬಾನಿಯವರೊಂದಿಗೆ ಕುಟುಂಬ ವ್ಯವಹಾರವನ್ನು ಸೇರಿಕೊಂಡರು. ಈಗ ಆಕೆ ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ. ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್, ಮುಂಬೈ ಇಂಡಿಯನ್ಸ್ ಟೀಮ್ ಮಾಲೀಕರೂ ಹೌದು. ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕರೂ ಆಗಿದ್ದಾರೆ.
“ಸಂಪತ್ತು ಮತ್ತು ಅಧಿಕಾರ ಒಟ್ಟಿಗೆ ಹೋಗುವುದಿಲ್ಲ. ನನಗೆ ಅಧಿಕಾರವು ಜವಾಬ್ದಾರಿಯಾಗಿದೆ. ನಾನು ಅದನ್ನು ನನ್ನ ಕುಟುಂಬ, ನನ್ನ ಕೆಲಸ, ನನ್ನ ಉತ್ಸಾಹ ಮತ್ತು ನನ್ನ ಮಧ್ಯಮ ವರ್ಗದ ಮೌಲ್ಯಗಳಿಂದ ಪಡೆದುಕೊಂಡಿದ್ದೇನೆ.”ಅಂತಾ ಸಂದರ್ಶನವೊಂದರಲ್ಲಿ ನೀತಾ ಹೇಳಿದ್ದರು. ನೀತಾ ಅಂಬಾನಿ ಅಪಾರ ಸಂಪತ್ತನ್ನು ಹೊಂದಿದ್ದರೂ ಸರಳ ನಡೆನುಡಿಯಿಂದ ಮೆಚ್ಚುಗೆ ಗಳಿಸಿದ್ದಾರೆ.