ಭಾರತೀಯ ಚಿತ್ರರಂಗದಲ್ಲಿ ಅನೇಕ ಪ್ರಸಿದ್ಧ ನಟಿಯರಿದ್ದಾರೆ. ತಮ್ಮ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದಲೇ ಛಾಪು ಮೂಡಿಸಿದ್ದಾರೆ. ಆದರೆ ಹೆಸರಿನ ಜೊತೆಗೆ ಅಪಾರ ಸಂಪತ್ತನ್ನೂ ಗಳಿಸಿದವರು ಅಪರೂಪ. ಅವರಲ್ಲೊಬ್ಬರು 60ರ ದಶಕದ ಜನಪ್ರಿಯ ನಟಿ ಜಯಲಲಿತಾ. ಕೇವಲ 31ನೇ ವಯಸ್ಸಿನಲ್ಲಿ ಚಲನಚಿತ್ರ ಪ್ರಪಂಚದಿಂದ ನಿವೃತ್ತರಾದರು ಜಯಲಲಿತಾ. ನಟನೆಯ ಜೊತೆಗೆ ರಾಜಕೀಯದಲ್ಲೂ ಸೈ ಎನಿಸಿಕೊಂಡಿದ್ದ ಚತುರಮತಿ ಇವರು.
ಚಿತ್ರರಂಗದಿಂದ ಕೊಂಚ ಬಿಡುವು ಮಾಡಿಕೊಂಡು ರಾಜಕೀಯಕ್ಕೆ ಕಾಲಿಟ್ಟ ಜಯಲಲಿತಾ ಅಪಾರ ಸಂಪತ್ತಿಗೆ ಒಡತಿಯಾಗಿದ್ದರು. ಅವರ ಬಳಿ 28 ಕೆಜಿ ಚಿನ್ನ ಇತ್ತು. ವರದಿಗಳ ಪ್ರಕಾರ ಜಯಲಲಿತಾ ಬಳಿ 28 ಕೆಜಿ ಚಿನ್ನ, 10,500 ಸೀರೆಗಳು, 750 ಜೋಡಿ ಶೂಗಳು, 91 ಕೈಗಡಿಯಾರಗಳು ಮತ್ತು 1250 ಕೆಜಿ ಬೆಳ್ಳಿ ಇತ್ತು. ಜಯಲಲಿತಾರ ಆಸ್ತಿ 900 ಕೋಟಿ ಎಂದು ಹೇಳಲಾಗುತ್ತದೆ. ಕರ್ನಾಟಕದ ಮಂಡ್ಯದಲ್ಲಿ 1948ರಲ್ಲಿ ಜನಿಸಿದ ಕೇವಲ 13 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ನಂತರ 1964 ರಲ್ಲಿ ಮೊದಲ ಬಾರಿ ನಾಯಕಿಯಾಗಿ ಬಣ್ಣ ಹಚ್ಚಿದರು. ಕನ್ನಡದ ಚಿನ್ನದ ಗೊಂಬೆ ಚಿತ್ರದ ನಂತರ, 1964 ರಲ್ಲಿ ಇಂಗ್ಲಿಷ್ ಸಿನೆಮಾದಲ್ಲೂ ಅಭಿನಯಿಸಿದರು. ಹಲವಾರು ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಜಯಾ, 1968 ರಲ್ಲಿ ಹಿಂದಿ ಸಿನೆಮಾ ಇಜ್ಜತ್‌ನಲ್ಲಿ ಕಾಣಿಸಿಕೊಂಡರು. ಇದು ಜಯಲಲಿತಾ ಅವರ ಮೊದಲ ಮತ್ತು ಕೊನೆಯ ಹಿಂದಿ ಚಿತ್ರ. 1980 ರಲ್ಲಿ ಜಯಲಲಿತಾ ಚಿತ್ರರಂಗಕ್ಕೆ ವಿದಾಯ ಹೇಳಿ, ರಾಜಕೀಯದ ಅಖಾಡಕ್ಕೆ ಧುಮುಕಿದರು.