ಇಡೀ ದೇಶವೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ, ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದೆ. ಈಗ ಅಪರಾಧಿ ಅಫ್ತಾಬ್, ಶ್ರದ್ಧಾ ಹತ್ಯೆಯ ನಂತರ ಆಕೆಯ ಎಟಿಎಂ ಮತ್ತು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದ ಅನ್ನೋ ಮಾಹಿತಿ ಹೊರಬಿದ್ದಿದೆ. ಇದಲ್ಲದೇ ಶ್ರದ್ಧಾ ಖಾತೆಯಿಂದ, ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಅಫ್ತಾಬ್ ಮಾಡಿರುವ ಈ ಒಂದು ತಪ್ಪು ಈ ಪ್ರಕರಣ ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದೆ.
ಮೇ 26 ರಂದು ಶ್ರದ್ಧಾ ಅವರ ಫೋನ್ ಸ್ವಿಚ್ ಆಫ್ ಆಗಿದ್ದು, ಆಫ್ತಾಬ್ ಮೇ 22 ರಿಂದ ಮೇ 26 ರ ನಡುವೆ ಶ್ರದ್ಧಾ ಫೋನ್ ಮೂಲಕ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಲು ಬಳಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಶ್ರದ್ಧಾಳ ಬ್ಯಾಂಕ್ ಅಕೌಂಟ್‌ನಿಂದ, ಅಫ್ತಾಬ್ ತನ್ನ ಖಾತೆಗೆ 54,000 ರೂಪಾಯಿಗಳನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡಿದ್ದಾನೆ. ಅಲ್ಲದೇ ದೆಹಲಿಯ ಛತ್ತರ್‌ಪುರದಿಂದ ಫೋನ್‌ನಿಂದ ಆನ್‌ಲೈನ್ ವಹಿವಾಟು ಮಾಡಿಕೊಳ್ಳಲಾಗಿದೆ ಅನ್ನೋ ಮಾಹಿತಿ ತನಿಖೆ ವೇಳೆ ಪೊಲೀಸರಿಗೆ ತಿಳಿದಿದೆ.
ಶ್ರದ್ಧಾ ಹತ್ಯೆಯ ನಂತರ ಅಫ್ತಾಬ್ ಈ ಕೊಲೆಯನ್ನು ಮರೆಮಾಚಲು ನಾನಾ ತಂತ್ರಗಳನ್ನು ಹೆಣೆದಿದ್ದ. ಪೊಲೀಸ್ ಮೂಲಗಳ ಪ್ರಕಾರ, ಕೆಲವೊಮ್ಮೆ ಕೊಲೆಯ ನಂತರ ಬ್ರೇಕಪ್ ಅನ್ನು ತೋರಿಸಲು ಅವನು ಅವಳ ಫೋನ್‌ನಿಂದ ಹಣವನ್ನು ಕಳುಹಿಸುತ್ತಿದ್ದ ಮತ್ತು ಕೆಲವೊಮ್ಮೆ ಅವಳ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದ. ಆದರೆ, ಯಾವಾಗ ತಾನು ಸಿಕ್ಕಿಬೀಳಬಹುದು ಎಂದು ಅನಿಸಿತೋ ಆಗ ಈತ ಹುಚ್ಚನಂತೆ ನಟಿಸುತ್ತಿದ್ದ.
ಅಫ್ತಾಬ್ ಶ್ರದ್ಧಾ ಕೊಲೆಯನ್ನ ಮುಚ್ಚಿಡುವುದಕ್ಕಾಗಿ ಆಕೆಯ ಸೋಶಿಯಲ್ ಮಿಡಿಯಾ ಅಕೌಂಟ್‌ನ್ನ ತಾನೇ ನೋಡಿಕೊಳ್ಳುತ್ತಿದ್ದ. ಪದೇ ಪದೇ ಅವುಗಳನ್ನ ಅಪ್‌ಡೇಟ್ ಮಾಡುತ್ತಿದ್ದ. ಇದರಿಂದ ಎಲ್ಲರೂ ಶ್ರದ್ಧಾನೇ ಇದೆಲ್ಲ ಮಾಡುತ್ತಿದ್ದಾಳೆ ಅಂತ ಅಂದುಕೊಂಡಿದ್ದರು. ಆದರೆ ಯಾವಾಗ ಆಫ್ತಾಬ್, ಶ್ರದ್ಧಾ ಬ್ಯಾಂಕ್ ಅಕೌಂಟ್‌ನಿಂದ ದುಡ್ಡು ಟ್ರಾನ್ಸ್‌ಫರ್ ಮಾಡಿಕೊಂಡಿದ್ದಾನೆ ಅನ್ನೊ ಮಾಹಿತಿ ಮಾಣಿಕ್‌ಪುರ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೋ, ಆಗಲೇ ಆಫ್ತಾಬ್ ಮೇಲೆ ಇದ್ದ ಅನುಮಾನ ಗಟ್ಟಿಯಾಗಿತ್ತು. ಪೊಲೀಸರು ಇದರ ಬಗ್ಗೆ ಆಫ್ತಾಬ್‌ಗೆ ಕೇಳಿದಾಗ ಆಗ ಅಸಲಿ ಸತ್ಯವನ್ನ ಆತ ಬಾಯಿ ಬಿಟ್ಟಿದ್ದ.
ತಕ್ಷಣವೇ ಮಾಣಿಕ್‌ಪುರ ಪೊಲೀಸರು, ದೆಹಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಪರಾಧಿಯನ್ನ ವಶಕ್ಕೆ ಪಡೆದಿರುವ ಪೊಲೀಸರು ಶ್ರದ್ಧಾ ಕೊಲೆ ಪ್ರಕರಣ ಹಂತ ಹಂತವಾಗಿ ಭೇದಿಸುತ್ತಿದ್ದಾರೆ.