ಬಾಲಿವುಡ್ ನ ಶೇರ್ಷಾ ಚಿತ್ರದ ರಂಝಾ ಹಾಡನ್ನು ಪ್ರಪಂಚದಾದ್ಯಂತ ಅನೇಕ ಮಂದಿ ಬಹಳ ಇಷ್ಟಪಟ್ಟಿದ್ದಾರೆ.
ಈ ರೊಮ್ಯಾಂಟಿಕ್ ಹಾಡು ಭಾಷೆ, ಗಡಿಯನ್ನೂ ಮೀರಿ ದಾಟಿದ್ದು, ಇದೀಗ ಅದು ನೆದರ್ಲ್ಯಾಂಡ್ ಅನ್ನು ತಲುಪಿದೆ. ಈ ಹಾಡನ್ನು ಡಚ್ ಗಾಯಕಿ ಇಂಗ್ಲೀಷ್ ಆವೃತ್ತಿಯಲ್ಲಿ ಹಾಡಿದ್ದು, ಭಾರಿ ವೈರಲ್ ಆಗಿದೆ.
ಗಾಯಕರಾದ ಜಸ್ಲೀನ್ ರಾಯಲ್ ಮತ್ತು ಬಿ ಪ್ರಾಕ್ ಅವರು ಮೂಲ ಹಾಡನ್ನು ಹಾಡಿದ್ದು, ಇದೀಗ ಇಂಗ್ಲೀಷ್ ನಲ್ಲಿ ಡಚ್ ಗಾಯಕಿ ಎಮ್ಮಾ ಹೀಸ್ಟರ್ಸ್ ಹಾಡಿದ್ದಾರೆ. ಸಾಹಿತ್ಯ ಮಾತ್ರ ಇಂಗ್ಲೀಷ್ ನಲ್ಲಿದ್ದು, ಮ್ಯೂಸಿಕ್ ನಿಂದ ಬೀಟ್ ವರೆಗೆ ಎಲ್ಲವನ್ನೂ ಮೂಲ ಹಾಡಿನಂತೆಯೇ ಹಾಡಲಾಗಿದೆ. ಈ ಹಾಡಿನ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, 87,000ಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ಆಕೆಯ ಪ್ರತಿಭೆಗೆ ನೆಟ್ಟಿಗರು ಬೆರಗಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಕಾಮೆಂಟ್ ವಿಭಾಗವು ಬೆಂಕಿ ಮತ್ತು ಹೃದಯದ ಎಮೋಜಿಗಳಿಂದ ತುಂಬಿವೆ. ಗಾಯಕಿ ಅದ್ಭುತವಾಗಿ ಹಾಡಿದ್ದಾರೆ ಎಂದು ನೆಟ್ಟಿಗರು ಹೊಗಳಿ ಅಟ್ಟಕ್ಕೇರಿಸಿದ್ದಾರೆ.