ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆಯಲು ಮುಂದಾಗಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವದ ಜೊತೆಗೆ ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿರುವ ಅವರು ಬೆಂಬಲಿಗರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಜಗದೀಶ್ ಶೆಟ್ಟರ್ ಅವರೊಂದಿಗೆ ಮಾತುಕತೆ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಸಭಾ ಸದಸ್ಯತ್ವ ನೀಡಿ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಪ್ರಸ್ತಾವನೆ ಇರಿಸಿದ್ದರೆನ್ನಲಾಗಿದೆ. ಇದು ಒಪ್ಪಿಗೆಯಾಗದ್ದಿದ್ದರೆ ಯಾವುದಾದರೂ ಒಂದು ರಾಜ್ಯಕ್ಕೆ ರಾಜ್ಯಪಾಲರನ್ನಾಗಿಸುವ ಆಫರ್ ಕೂಡ ಇತ್ತು ಎನ್ನಲಾಗಿದೆ.
ಆದರೆ ಇದ್ಯಾವುದಕ್ಕೂ ಜಗ್ಗದ ಜಗದೀಶ್ ಶೆಟ್ಟರ್ ಅಂತಿಮವಾಗಿ ಬಿಜೆಪಿ ತೊರೆಯಲು ನಿರ್ಧರಿಸಿದ್ದಾರೆ. ಜೊತೆಗೆ ಪಕ್ಷದ ಕೆಲವೊಂದು ನಾಯಕರ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿರುವ ಅವರು, ಲಿಂಗಾಯತರನ್ನು ತುಳಿಯಲು ವ್ಯವಸ್ಥಿತ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಚುನಾವಣೆಯಲ್ಲಿ ತಾವು ಸ್ಪರ್ಧಿಸಿಯೇ ಸಿದ್ದ ಎಂದು ಶೆಟ್ಟರ್ ತಿಳಿಸಿದ್ದಾರೆ.