ವಿವಾಹ ಸೇರಿದಂತೆ ಬಹುತೇಕ ಶುಭ ಸಮಾರಂಭಗಳು ಈಗ ನಡೆಯುತ್ತಿವೆ. ಇದೀಗ ಕೊರೋನಾ ಸಹ ಅಂತ್ಯಗೊಳ್ಳುವ ಸೂಚನೆ ಕಂಡು ಬರುತ್ತಿದ್ದು, ಹೀಗಾಗಿ ಶುಭ ಸಮಾರಂಭಗಳನ್ನು ಹಮ್ಮಿಕೊಳ್ಳಲು ಜನತೆ ಉತ್ಸುಕರಾಗಿದ್ದಾರೆ. ಇದರ ಮಧ್ಯೆ ಚಿನ್ನ – ಬೆಳ್ಳಿ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ.
ಹೌದು, ಭಾರತೀಯರು ವಿವಾಹ ಸೇರಿದಂತೆ ಶುಭ ಸಮಾರಂಭಗಳ ವೇಳೆ ಚಿನ್ನ – ಬೆಳ್ಳಿ ಖರೀದಿಸುವ ವಾಡಿಕೆಯಿದ್ಧು, ಆದರೆ ರಷ್ಯಾ – ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಫೆಬ್ರವರಿ 1ರಿಂದ 18 ನೇ ತಾರೀಖಿನ ನಡುವೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,060 ರೂಪಾಯಿಗಳ ಏರಿಕೆ ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
ಫೆಬ್ರವರಿ 1ರಂದು ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 49,580 ರೂಪಾಯಿಗಳಾಗಿದ್ದರೆ ಅದು ಫೆಬ್ರವರಿ 18ರ ಶುಕ್ರವಾರದಂದು 51,640 ರೂಪಾಯಿಗಳಿಗೆ ತಲುಪಿದೆ. ಒಂದೊಮ್ಮೆ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಸಂಭವಿಸಿದರೆ ಚಿನ್ನದ ಬೆಲೆ 55 ಸಾವಿರ ರೂಪಾಯಿಗಳ ಗಡಿ ದಾಟಿದರೂ ಅಚ್ಚರಿಯಿಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಬೆಳ್ಳಿ ಬೆಲೆಯಲ್ಲಿ ಸಹ ಏರಿಕೆ ಕಂಡುಬರುತ್ತಿದ್ದು, ಹೀಗಾಗಿ ಚಿನ್ನ -ಬೆಳ್ಳಿ ಖರೀದಿಸುವ ಲೆಕ್ಕಾಚಾರದಲ್ಲಿದ್ದವರು ಕಂಗಾಲಾಗಿ ಕುಳಿತಿದ್ದಾರೆ.