ಶುಭ ಮುಹೂರ್ತ ಇಲ್ಲ ಎಂದು ನೆಪ ನೀಡಿ ಬರೋಬ್ಬರಿ 10 ವರ್ಷಗಳ ಕಾಲ ವೈವಾಹಿಕ ಜೀವನಕ್ಕೆ ಕಾಲಿಡದ ಪತ್ನಿಯ ಬಗ್ಗೆ ಪತಿ ಸಲ್ಲಿಸಿದ ಅರ್ಜಿ ಆಲಿಸಿದ ಚತ್ತೀಸಗಢ ಹೈಕೋರ್ಟ್ ವಿಚ್ಚೇದನ ನೀಡಿದೆ. ಇಬ್ಬರು ಬೇರಾಗಲು ಇದು ಸರಿಯಾದ ಮಾರ್ಗವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವೈವಾಹಿಕ ಜೀವನವು ಸುಖಮಯವಾಗಿರಲಿ ಹಾಗೂ ಸಂತೋಷಮಯವಾಗಿರಲಿ ಎಂದು ಶುಭ ಮುಹೂರ್ತ ನೋಡುವ ಸಂಪ್ರದಾಯ ಹಿಂದೂ ಧರ್ಮದಲ್ಲಿದೆ. ಆದರೆ ಈ ಪ್ರಕರಣದಲ್ಲಿ ಮಾತ್ರ ಪತ್ನಿಯು ವೈವಾಹಿಕ ಜೀವನದಿಂದ ಪಾರಾಗಲು ಶುಭ ಮುಹೂರ್ತವನ್ನು ಒಂದು ಅಸ್ತ್ರವನ್ನಾಗಿ ಮಾಡಿಕೊಂಡಿರುವುದು ಕಂಡುಬರುತ್ತಿದೆ ಎಂದು ನ್ಯಾಯಮೂರ್ತಿ ಗೌತಮ್ ಭಾದುರಿ ಹಾಗೂ ನ್ಯಾಯಮೂರ್ತಿ ರಜನಿ ದುಬೆ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.
ವಿಚ್ಛೇದನದ ಆದೇಶ ನೀಡುವ ಮೂಲಕ ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ ಈ ವಿವಾಹವನ್ನು ವಿಸರ್ಜಿಸಲು ನ್ಯಾಯಾಲಯವು ಆದೇಶ ನೀಡಿದೆ. ಸತ್ಯಾಂಶಗಳ ಬಗ್ಗೆ ಸಂಪೂರ್ಣ ಅರಿವಿರುವ ಪತ್ನಿಯು ಪತಿಯನ್ನು ತೊರೆದಿದ್ದಾಳೆ. ಹೀಗಾಗಿ ಪತಿಯು ವಿಚ್ಚೇದನವನ್ನು ಪಡೆಯಲು ಸಂಪೂರ್ಣ ಅರ್ಹರಿದ್ದಾರೆ ಎಂದು ನ್ಯಾಯಾಲಯವು ಹೇಳಿದೆ.
ವಿಚ್ಚೇದನ ಅರ್ಜಿಯನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಸಂತೋಷ್ ಸಿಂಗ್ ಮೇಲ್ಮನವಿ ಸಲ್ಲಿಸಿದ್ದರು. ಸಂತೋಷ್ ಸಿಂಗ್ 2010ರ ಜುಲೈ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಅವರು ಪತ್ನಿಯೊಂದಿಗೆ ಕೇವಲ 11 ದಿನಗಳ ಕಾಲ ವಾಸವಿದ್ದರು. ಇದಾದ ಬಳಿಕ ಪತ್ನಿಯ ತವರು ಮನೆಯವರು ಆಕೆಗೆ ಪ್ರಮುಖ ಕೆಲಸವಿದೆ ಎಂದು ಹೇಳಿ ಗಂಡನ ಮನೆಯಿಂದ ಕರೆದುಕೊಂಡು ಹೋಗಿದ್ದರು.
ಇದಾದ ಬಳಿಕ ಪತಿಯು ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಬರಲು ಮುಂದಾದರೂ ಸಹ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಇದು ಶುಭ ಮುಹೂರ್ತವಲ್ಲ ಎಂದು ನೆಪ ನೀಡಿ ಗಂಡನ ಮನೆಗೆ ಕಳಿಸಲು ನಿರಾಕರಿಸುತ್ತಿದ್ದರು ಎನ್ನಲಾಗಿದೆ.