ಒಂದು ವೇಳೆ ನೀವು ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ ಘಜನಿ ಸಿನಿಮಾ ನೋಡಿದ್ದರೆ, ಅದರಲ್ಲಿ ನಟನ ತಲೆಗೆ ಏಟು ಬಿದ್ದ ನಂತರ ನೆನಪಿನ ಶಕ್ತಿ ಕಳೆದುಹೋಗಿರುವ ಬಗ್ಗೆ ಕಥೆಯಿದೆ. ಹಾಗೆಯೇ ನೈಜ ಜೀವನದಲ್ಲಿ ಮಹಿಳೆಯೊಬ್ಬಳಿಗೆ ತನ್ನ ಮಗನಿಂದ ಶೀತ ತಗುಲಿ, 20 ವರ್ಷಗಳ ನೆನಪು ಶಕ್ತಿಯನ್ನು ಕಳೆದುಕೊಂಡಿರುವ ವಿಲಕ್ಷಣ ಘಟನೆ ನಡೆದಿದೆ.
43 ವರ್ಷದ ಮಹಿಳೆಯೊಬ್ಬರು ಶೀತದಿಂದಾಗಿ 20 ವರ್ಷಗಳ ನೆನಪುಗಳನ್ನು ಹೇಗೆ ಕಳೆದುಕೊಂಡರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಕ್ಲೇರ್ ಮಫೆಟ್ ರೀಸ್ ಅವರಿಗೆ 2021 ರಲ್ಲಿ ತನ್ನ ಮಗನಿಂದಲೇ ಶೀತ ತಗುಲಿತ್ತು. ರಾತ್ರಿ ಮಲಗಿ ಮರುದಿನ ಬೆಳಗ್ಗೆ ಎದ್ದಾಗ ಆಕೆಗೆ ಕಳೆದ 20 ವರ್ಷಗಳಿಂದ ನಡೆದ ಏನೂ ಕೂಡ ನೆನಪಿರಲಿಲ್ಲ.
ಮಹಿಳೆಯ ಆರೋಗ್ಯ ಸ್ಥಿತಿಯು ವೇಗವಾಗಿ ಕುಂಠಿತಗೊಂಡಿತು. ಇದರಿಂದಾಗಿ ಮಹಿಳೆ 16 ದಿನಗಳವರೆಗೆ ಕೋಮಾಕ್ಕೆ ಜಾರಿದ್ದಳು. ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆರಂಭಿಕ ರೋಗನಿರ್ಣಯದ ನಂತರ, ಕ್ಲೇರ್ ಮೆದುಳಿಗೆ ರಕ್ತಸ್ರಾವವಾಗಿದೆ ಎಂದು ವೈದ್ಯರು ಅಂದುಕೊಂಡಿದ್ದರು. ಆದರೆ ಹೆಚ್ಚಿನ ಪರೀಕ್ಷೆಗಳಲ್ಲಿ ಆಕೆ ಎನ್ಸೆಫಾಲಿಟಿಸ್ ನಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ.
ರಾಯಲ್ ಲಂಡನ್ ಆಸ್ಪತ್ರೆಗೆ ದಾಖಲಾದ ಎರಡು ವಾರಗಳ ನಂತರ, ಕ್ಲೇರ್ ತನ್ನ ಸ್ಮರಣೆಯನ್ನು ಕಳೆದುಕೊಂಡಿದ್ದಾಳೆ ಎಂದು ಕಂಡುಬಂದಿದೆ. ಮಹಿಳೆಯು ಕುಟುಂಬ ಸದಸ್ಯರ ಮುಖಗಳನ್ನು ನೆನಪಿಸಿಕೊಳ್ಳಬಹುದು. ಆದರೆ, ಮದುವೆ, ಗರ್ಭಧಾರಣೆ, ಹೆರಿಗೆ ಮತ್ತು ರಜಾದಿನಗಳಂತಹ ಪ್ರಮುಖ ಜೀವನದ ಘಟನೆಗಳನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದರು. ಸುದೀರ್ಘ ವಿರಾಮದ ನಂತರ ಮರೆತುಹೋದ ನೆನಪುಗಳಿಗೆ ಮತ್ತೆ ಆಕೆ ಹಿಂತಿರುಗಿದ್ದು, ಮತ್ತೆ ಪತ್ರಕರ್ತೆಯಾಗಿ ಕೆಲಸ ಆರಂಭಿಸಿದ್ದಾರೆ. ಇದೀಗ ಈ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.