
ನವಜಾತ ಶಿಶುವಿಗೆ ತಾಯಿಯ ಹಾಲು ಉತ್ತಮ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಹುಟ್ಟಿದ ತಕ್ಷಣ ತಾಯಿಯ ದಪ್ಪ ಹಳದಿ ಹಾಲನ್ನು ಕುಡಿಸಿದರೆ ಮಗುವಿನ ಆರೋಗ್ಯವು ಸುಧಾರಿಸುತ್ತದೆ ಎನ್ನುತ್ತಾರೆ ವೈದ್ಯರು. ಆದರೆ ಕಳೆದ ಕೆಲವು ದಶಕಗಳಿಂದ ಶಿಶುಗಳಿಗೆ ತಾಯಿಯ ಎದೆಹಾಲಿನ ಬದಲು ಫಾರ್ಮುಲಾ ಮಿಲ್ಕ್ ಕುಡಿಸುವ ಪ್ರವೃತ್ತಿ ಹೆಚ್ಚಾಗಿದೆ.
ಸ್ತನ್ಯಪಾನವು ಮಗುವನ್ನು ಅಲ್ಪಾವಧಿಯ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಅನೇಕ ಮಹಿಳೆಯರಿಗೆ ಸೂಕ್ತ ಪ್ರಮಾಣದಲ್ಲಿ ಎದೆಹಾಲು ಉತ್ಪತ್ತಿಯಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಮಗುವಿಗೆ ಫಾರ್ಮುಲಾ ಮಿಲ್ಕ್ ಕುಡಿಸಬೇಕಾಗುತ್ತದೆ. ಆದರೆ ತಾಯಿಯಲ್ಲಿ ಹಾಲಿನ ಉತ್ಪಾದನೆಯಿದ್ದಾಗ ಶಿಶುವಿಗೆ ಅದನ್ನೇ ಕೊಡಬೇಕು.
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ: ಸಣ್ಣ ಮಕ್ಕಳಿಗೆ ವೈರಲ್ ಸೋಂಕಿನ ಅಪಾಯವು ತುಂಬಾ ಹೆಚ್ಚಾಗಿರುತ್ತದೆ. ಇದರಿಂದಾಗಿ ಜ್ವರ ಮತ್ತು ಇತರ ಕಾಯಿಲೆಗಳು ಬರಬಹುದು. ಹುಟ್ಟಿದಾಗಿನಿಂದ ತಾಯಿಯ ಹಾಲನ್ನು ಕುಡಿಯುವ ನವಜಾತ ಶಿಶುಗಳಲ್ಲಿ ರೋಗನಿರೋಧಕ ಶಕ್ತಿ ಇತರ ಮಕ್ಕಳಿಗಿಂತ ಉತ್ತಮವಾಗಿರುತ್ತದೆ. ತಾಯಿಯ ಎದೆಹಾಳು ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಸಹಕಾರಿ: ತಾಯಿಯ ಹಾಲಿನಲ್ಲಿ ಆ್ಯಂಟಿಒಕ್ಸಿಡೆಂಟ್‌ಗಳು, ಕಿಣ್ವಗಳು ಮತ್ತು ಪ್ರತಿಕಾಯಗಳು ಕಂಡುಬರುತ್ತವೆ. ಇದು ಮಕ್ಕಳನ್ನು ರೋಗಗಳಿಂದ ರಕ್ಷಿಸುತ್ತದೆ. ಮಗು ಯಾವುದೇ ರೀತಿಯ ಕಾಯಿಲೆಗೆ ತುತ್ತಾದರೆ ಅದರಿಂದ ಬೇಗನೆ ಚೇತರಿಸಿಕೊಳ್ಳುತ್ತದೆ.
ಹೊಟ್ಟೆಯ ಸಮಸ್ಯೆ ಪರಿಹಾರ: ಚಿಕ್ಕ ಮಕ್ಕಳಲ್ಲಿ ಹೊಟ್ಟೆಯ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಅತಿಸಾರ, ಮಲಬದ್ಧತೆ, ವಾಂತಿ ಮತ್ತು ಗ್ಯಾಸ್ ಹೀಗೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಮಗುವಿಗೆ ಅಂತಹ ಸಮಸ್ಯೆಗಳು ಬರಬಾರದು ಎಂದು ನೀವು ಬಯಸಿದರೆ ತಾಯಿಯ ಹಾಲನ್ನು ನೀಡಬೇಕು.
ಶಿಶು ಮರಣ ಪ್ರಮಾಣ ಕಡಿಮೆಯಾಗುತ್ತದೆ: ಅನೇಕ ಮಕ್ಕಳು ತಮ್ಮ ಮೊದಲ ಜನ್ಮದಿನದವರೆಗೆ ಬದುಕುಳಿಯುವುದಿಲ್ಲ. ತಾಯಿಯ ಹಾಲನ್ನು ಸೇವಿಸದ ಶಿಶುಗಳಲ್ಲಿ ಶಿಶು ಮರಣ ಪ್ರಮಾಣವು ಹೆಚ್ಚು ಕಂಡುಬರುತ್ತದೆ ಎಂದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಏಕೆಂದರೆ ಅವರು ರೋಗಗಳಿಂದ ರಕ್ಷಿಸಲ್ಪಡುವುದಿಲ್ಲ.
ತೂಕ ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ: ಮಕ್ಕಳಲ್ಲಿ ಸ್ಥೂಲಕಾಯತೆಯು ಅಪಾಯಕಾರಿ. ಆದರೆ ತಾಯಿಯ ಹಾಲನ್ನು ನಿಯಮಿತವಾಗಿ ಕುಡಿಯುವುದು ಮಗುವಿನ ತೂಕವನ್ನು ನಿಯಂತ್ರಿಸುತ್ತದೆ. ಇದು ಮಕ್ಕಳ ಬಾಯಿಯ ಆರೋಗ್ಯಕ್ಕೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಕುಳಿಗಳು ಮತ್ತು ಇತರ ಹಲ್ಲಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.