
ಇಂದು ಮುಂಜಾನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಪೂತಲಪಟ್ಟು ತಾಲೂಕಿನ ಪಿ. ಕೊತ್ತಕೋಟ ಗ್ರಾಮದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಪ್ರಕರಣವೊಂದರ ತನಿಖೆಗಾಗಿ ತಿರುಪತಿಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ರೋಲವಾಡಿ ಗ್ರಾಮದ ಪಿ.ಎಸ್.ಐ. ಅವಿನಾಶ್ (29), ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಳಕೆರೆ ಗ್ರಾಮದ ಕಾನ್ ಸ್ಟೇಬಲ್ ಅನಿಲ್ ಮುಲಿಕ್ (26) ಹಾಗೂ ಚಾಲಕ ಜೋಸೆಫ್ ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದರ ಮಧ್ಯೆ ಅಪಘಾತದ ಸುದ್ದಿ ತಿಳಿದು ಶಿವಾಜಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. ಅಲ್ಲದೇ ತಮ್ಮೊಂದಿಗೆ ನಿನ್ನೆ ತನಕ ಕೆಲಸ ಮಾಡಿದ್ದವರು ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸಾವನ್ನಪ್ಪಿದ ಸಹೋದ್ಯೋಗಿಗಳನ್ನು ನೆನೆದು ಠಾಣೆಯ ಸಿಬ್ಬಂದಿ ಭಾವುಕರಾಗಿದ್ದಾರೆ.