ಭ್ರಷ್ಟಾಚಾರ ನಿಗ್ರಹ ದಳ, ಬಿಬಿಎಂಪಿಯ ಮಹಾ ಹಗರಣವನ್ನು ಬಯಲಿಗೆಳೆಯಲು ಎಲ್ಲಾ ಸಿದ್ಧತೆ ನಡೆಸಿಕೊಳ್ಳುತ್ತಿರುವ ಹಾಗಿದೆ. ಎರಡು ದಿನಗಳ ಕಾಲ ಕಡತಗಳ ಪರೀಕ್ಷೆ ನಡೆಸಿರುವ ಎಸಿಬಿ ಅಧಿಕಾರಿಗಳು, ಈಗಾಗ್ಲೇ ಪಾಲಿಕೆಯ ಮಹಾ ಭ್ರಷ್ಟಾಚಾರದ ಬಗ್ಗೆ ಕೆಲವು ಸುಳಿವುಗಳನ್ನು ಬಿಟ್ಟು ಕೊಟ್ಟಿದ್ದಾರೆ.
ಇಂದು ಶಿವರಾತ್ರಿ ಹಬ್ಬವಾದರೂ ಪಾಲಿಕೆಯ ವಿರುದ್ಧ ದಾಳಿ ಮುಂದುವರೆಸಿರುವ ಎಸಿಬಿ ಅಧಿಕಾರಿಗಳು, ಫೀಲ್ಡ್ ಪರಿಶೀಲನೆಗೆ ಇಳಿದಿದ್ದಾರೆ. ಕಡತಗಳ ಪರಿಶೀಲನೆ ನಾಳೆ ಮುಂದುವರೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಟಿಡಿಆರ್, ಓಸಿ, ಕೆರೆ ಒತ್ತುವರಿ ಸೇರಿದಂತೆ ಎಸಿಬಿ ಅಧಿಕಾರಿಗಳು, ಪಾಲಿಕೆ ಹಗರಣಕ್ಕೆ ಸಂಬಂಧಿಸಿದ ಹಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಖ್ಯವಾಗಿ ಮಡಿವಾಳ, ಯಲಹಂಕ, ಎಚ್ ಎಸ್ ಆರ್ ಲೇಔಟ್, ಬೆಳ್ಳಂದೂರು ಸೇರಿದಂತೆ ಬೆಂಗಳೂರಿನ ನಾನಾ ಭಾಗಕ್ಕೆ ಎಸಿಬಿಯ ಫೀಲ್ಡ್ ವಿಸಿಟ್ ಟೀಂ ಎಂಟ್ರಿ ಕೊಟ್ಟಿದೆ. ಸಧ್ಯಕ್ಕಿರುವ ಮಾಹಿತಿ ಪ್ರಕಾರ, ಎಸಿಬಿಯ 10 ಟೀಂ ಈಗಾಗ್ಲೇ ಅಕ್ರಮ ನಡೆದಿರುವ ಸ್ಥಳ ಪರಿಶೀಲನೆ ನಡೆಸೋಕೆ ಮುಂದಾಗಿದೆ.
ಐದು ಅಂತಸ್ತಿನ ಕಟ್ಟಡ ಅಂತ ಅನುಮತಿ ಪಡೆದು ಹತ್ತು ಅಂತಸ್ತಿನ ಬಿಲ್ಡಿಂಗ್ ನಿರ್ಮಿಸಿರೋ ಸಾಕಷ್ಟು ಬಿಲ್ಡಿಂಗ್ ಗಳು ಎಸಿಬಿ ಕಣ್ಣಿಗೆ ಬಿದ್ದಿದೆ. ಹತ್ತು ಅಂತಸ್ತಿನ ಕಟ್ಟಡಕ್ಕೆ, ಕೇವಲ ಐದು ಅಂತಸ್ತಿನ ತೆರಿಗೆಯನ್ನ ಮಾತ್ರ ಪಾವತಿಸುತ್ತಿರುವ ಬಗ್ಗೆಯೂ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಎಲ್ಲಾ ವಿಚಾರಗಳು ಕಣ್ಣಿಗೆ ಕಾಣುವಂತೆ ಇದ್ದರೂ, ಪಾಲಿಕೆಯ ಸೈಟ್ ಇಂಜಿನಿಯರ್ ಗಮನಹರಿಸದಿರುವುದು ಸಹ ಎಸಿಬಿ ತನಿಖೆಯಲ್ಲಿ ಬಯಲಾಗಿದೆ.
ಟ್ಯಾಕ್ಸ್ ನಂತರ, ಮಳೆನೀರು ನುಗ್ಗಿ ಹಾನಿಯಾದ ಸಂಬಂಧ ಹೂಳೆತ್ತಿರುವ ವಿಚಾರಕ್ಕೂ ಪಾಲಿಕೆ ಬೇಕಾಬಿಟ್ಟಿ ಬಿಲ್ ಮಾಡಿ ಭ್ರಷ್ಟಾಚಾರ ಎಸಗಿದೆ. ಇನ್ನು ಕಸದ ವಿಚಾರದಲ್ಲೂ ಕೋಟಿ ಕೋಟಿ ನುಂಗಿರುವುದು, ಸಣ್ಣಪುಟ್ಟ ವಾಹನಗಳ ನಂಬರ್ ಗಳನ್ನ ತೋರಿಸಿಕೊಂಡು 40-50 ಟ್ರಿಪ್ ಕಸ ವಿಲೇವಾರಿ ಮಾಡಿರೋದಾಗಿ ಸುಳ್ಳುಲೆಕ್ಕ ನೀಡಿರುವುದು. ಟಿಡಿಆರ್ ನಲ್ಲೂ ಕೂಡ ಬೇಕಾಬಿಟ್ಟಿ ಜಾಗದ ವಿಸ್ತೀರ್ಣವನ್ನ ಹೆಚ್ಚಿಸಿ ನ ದೊಡ್ಡ ದೊಡ್ಡ ಬಿಲ್ಡರ್ ಗಳಿಗೆ ಮಾರಾಟ ಮಾಡಿರುವುದು. ಮಡಿವಾಳ, ಬೆಳ್ಳಂದೂರು ಕೆರೆಯ ಜಾಗವನ್ನೂ ಕೂಡ ಅತಿಕ್ರಮಿಸಿಕೊಂಡಿರುವ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.