ಬೆಂಗಳೂರು: ಅಪ್ಪು ಇಲ್ಲವೆಂದು ಹೇಳಲು ತುಂಬಾ ಕಷ್ಟವಾಗುತ್ತಿದೆ. ನಮಗೆರಿಗಿಂತ ವಯಸ್ಸಿನಲ್ಲಿ ಚಿಕ್ಕವನಾಗಿದ್ದ. ಭಗವಂತನಿಗೆ ಇಷ್ಟವಾಗಿದೆ. ನಮಗೆ ನೋವು ಕೊಟ್ಟಿದೆ. ನಮಗಿಂತ ಹೆಚ್ಚಿಗೆ ಅಭಿಮಾನಿಗಳಿಗೆ ನೋವಾಗಿದೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಕುಟುಂಬದವರಿಗೆ ನೋವು ಸಹಜ. ನಿಮ್ಮೆಲ್ಲರ ನೋವು ನೋಡಿದರೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಅಪ್ಪು ಇಲ್ಲೇ ಎಲ್ಲೋ ಊರಿಗೆ ಹೋಗಿದ್ದಾನೆ, ಬರಬಹುದು ಅನಿಸುತ್ತಿದೆ. ಅವನಿಗಿಂತ 13 ವರ್ಷ ದೊಡ್ಡವನು ನಾನು ಅವನನ್ನು ಮಗುವಾಗಿದ್ದಾಗಿನಿಂದಲೂ ಎಲ್ಲ ನೋಡಿದ್ದೇನೆ. ಬಹಳ ನೋವಾಗಿದೆ. ಅಪ್ಪು ಕುಟುಂಬದೊಂದಿಗೆ ನಾವೆಲ್ಲರೂ ಇದ್ದೇವೆ. ಸರ್ಕಾರ, ಪೊಲೀಸರು, ಅಭಿಮಾನಿಗಳು, ಜನತೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ನಮ್ಮ ಕುಟುಂಬದ ಮೇಲೆ ಅಭಿಮಾನ ಇಟ್ಟು ಸಹಕಾರ ನೀಡಿದ್ದಾರೆ. ಸರ್ಕಾರಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಹಾಲು, ತುಪ್ಪ ಕಾರ್ಯ ಆಗುವವರೆಗೂ ಅಭಿಮಾನಿಗಳಿಗೆ ಪ್ರವೇಶ ಇರುವುದಿಲ್ಲ. ಬಳಿಕ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಅಭಿಮಾನಿಗಳಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅವರ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಚಿರಋಣಿಯಾಗಿರುತ್ತೇವೆ ಎಂದು ತಿಳಿಸಿದ್ದಾರೆ.
ಅಭಿಮಾನಿಗಳು ಯಾರೂ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ನಿಮಗೂ ಸಂಸಾರ ಇರುತ್ತದೆ. ಅಪ್ಪು ಇದನ್ನು ಇಷ್ಟಪಡುತ್ತಿರಲಿಲ್ಲ. ಯಾರು ತಾಳ್ಮೆ ಕಳೆದುಕೊಳ್ಳಬೇಡಿ. ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಅಭಿಮಾನಿಗಳ ನೋವಾ ಗೊತ್ತಾಗುತ್ತದೆ. ಅವರಿಗೂ ಸಂಸಾರ ಇರುತ್ತದೆ. ನೋವನ್ನು ನುಂಗಿಕೊಂಡು ಜವಾಬ್ದಾರಿಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.