ಗ್ರಾಮೀಣ ಸೊಗಡಿನ, ನೈಜ ಆಧಾರಿತ ಪ್ರೇಮದ ಹಂದರವಿರುವ ಶರ ಚಿತ್ರದ ಚಿತ್ರೀಕರಣ ಶಿವಮೊಗ್ಗ ಸುತ್ತಮುತ್ತ ಭರದಿಂದ ಸಾಗಿದ್ದು, ಹೊಸ ನಿರೀಕ್ಷೆಯ ಚಿತ್ರವಾಗಿದೆ ಎಂದು ನಿರ್ದೇಶಕ ಪ್ರಕಾಶ್ ರಾಜ್ ಹೇಳಿದರು.
ಅವರು ಶಿವಮೊಗ್ಗದ ಮೀಡಿಯಾ ಹೌಸ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಹಳ್ಳಿಯ ಸೊಗಡಿನ ಚಿತ್ರ ನಿರ್ಮಿಸುವ ಉದ್ದೇಶದಿಂದ ಈ ಚಿತ್ರವನ್ನು ಯುವಕರು ಮತ್ತು ಹೊಸಬರು ಸೇರಿಕೊಂಡು ಮಾಡುತ್ತಿದ್ದೇವೆ. ಶರ ಚಿತ್ರವು ಕೌತುಕದೊಂದಿಗೆ ಕೊನೆಯಾಗುತ್ತದೆ. ಪ್ರೇಮದ ಸುತ್ತ ಸುತ್ತುವ ಜೊತೆಗೆ ಹಳ್ಳಿಯ ಪರಿಸರದ ಕಥೆಯಿದ್ದು, ಚಿತ್ರದಲ್ಲಿ ಉತ್ತಮ ಹಾಡುಗಳು, ಇಂಪಾದ ಸಂಗೀತ, ಉತ್ತಮ ಛಾಯಾಗ್ರಹಣವಿದೆ. ಮನರಂಜನೆಯ ಜೊತೆಗೆ ಕಮರ್ಷಿಯಲ್ ಟಚ್ ಇದೆ ಎಂದರು.
ಶಿವಮೊಗ್ಗದ ಹತ್ತಿರವಿರುವ ಭದ್ರಾವತಿ ತಾಲೂಕಿನ ಹಂಚಿನಸಿದ್ದಾಪುರ ಸೇರಿದಂತೆ ಬಹುಪಾಲು ಚಿತ್ರೀಕರಣ ಶಿವಮೊಗ್ಗ ಜಿಲ್ಲೆಯಲ್ಲಿಯೇ ನಡೆದಿದೆ. ಈಗಾಗಲೇ ಶೇ.40ರಷ್ಟು ಚಿತ್ರೀಕರಣ ಮುಗಿದಿದ್ದು, ಶಿವಮೊಗ್ಗಕ್ಕೆ ಹೊಂದಿಕೊಂಡಂತೆ ಇರುವ ಸೂಳೆಕೆರೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಶಿವಮೊಗ್ಗದ ರಂಗಕಲಾವಿದ ವೈದ್ಯ ಸೇರಿದಂತೆ ಸ್ಥಳೀಯ ಕಲಾವಿದರು ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ ಎಂದರು.
ನಾಯಕನಾಗಿ ಪ್ರಶಾಂತ್ ಜೈ, ನಾಯಕಿಯಾಗಿ ತನುಪ್ರಸಾದ್, ಅಭಿನಯಿಸುತ್ತಿದ್ದಾರೆ. ಈ ಇಬ್ಬರೂ ಕೂಡ ಈಗಾಗಲೇ ಹಲವು ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ತನುಜಾ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿ ನಾಗರಾಜ್ ಅವರದ್ದು ಎಂದರು.
ಹಂಚಿನಸಿದ್ದಾಪುರದ ಹರೀಶ್, ಮಂಜುನಾಥ್, ಸುನಿಲ್ ನಿರ್ಮಾಪಕರಾಗಿದ್ದಾರೆ. ಹೊಸ ಪ್ರತಿಭೆಗಳಿಗೆ ಇಲ್ಲಿ ಅವಕಾಶವಿದೆ. ಮುಂದಿನ ಮಾರ್ಚ್ ಹೊತ್ತಿಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದರು.
ನಾಯಕಿ ತನುಪ್ರಸಾದ್ ಮಾತನಾಡಿ, ಈಗಾಗಲೇ ಒಂದೆರಡು ಚಿತ್ರಗಳಲ್ಲಿ ನಾನು ನಟಿಸಿದ್ದೇನೆ. ಈ ಚಿತ್ರದಲ್ಲಿ ಒಳ್ಳೆಯ ಪಾತ್ರವಿದೆ. ಇದೊಂದು ಕೌಟುಂಬಿಕ ಚಿತ್ರವೂ ಹೌದು. ಕೊನೆಯವರೆಗೂ ಕುತೂಹಲವನ್ನು ಕಾಪಾಡಿಕೊಳ್ಳುತ್ತದೆ ಎಂದರು.
ನಿರ್ಮಾಪಕರಾದ ಹರೀಶ್, ಮಂಜುನಾಥ್, ಸುನಿಲ್ ಮಾತನಾಡಿ, ಶಿವಮೊಗ್ಗ ಜಿಲ್ಲೆ ಚಿತ್ರರಂಗಕ್ಕೂ ಹೆಸರಾಗಬೇಕು ಎಂಬುದು ನಮ್ಮ ಇಷ್ಟ. ಶಿವಮೊಗ್ಗದಲ್ಲಿ ಚಿತ್ರ ನಿರ್ಮಾಣಕ್ಕೆ ಬೇಕಾದ ಸುಸಜ್ಜಿತ ಸ್ಟುಡಿಯೊ ಆಗಬೇಕಾಗಿದೆ. ಈ ಚಿತ್ರ ಸುಮಾರು 1 ಕೋಟಿ ರೂ. ಬಜೆಟ್ಟಿನದ್ದಾಗಿದ್ದು, ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟ ಪ್ರಶಾಂತ್ ಜೈ, ನಟಿ ತನುಜಾ, ಕ್ರಿಯೇಟಿವೇಟರ್ ಮುರಳಿ, ನಟ ದಾನಂ ಇದ್ದರು.