ಶಿವಮೊಗ್ಗ: ಜಿಲ್ಲೆಯಲ್ಲಿ ಆರಿದ್ರಾ ಮಳೆ ಅಬ್ಬರ ಮುಂದುವರೆದಿದ್ದು, ತುಂಗಾ ಜಲಾಶಯ ಭರ್ತಿಯಾಗಿ 18 ಗೇಟ್ ಗಳ ಮೂಲಕ 32085 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ತುಂಗಾ ಜಲಾಶಯದ ಗರಿಷ್ಠ 588.24 ಅಡಿ ಇದ್ದು, ಭಾರೀ ಪ್ರಮಾಣದ ಒಳಹರಿವು ಇದ್ದು, ನೀರಿನ ಪ್ರಮಾಣ ಅಪಾಯಮಟ್ಟಕ್ಕೇರಿದೆ. ನಗರದ ಪ್ರದೇಶದಲ್ಲಿ ಹರಿಯವು ತುಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕೋರ್ಪಲಯ್ಯನ ಛತ್ರದ ಬಳಿ ಇರುವ ಕಲ್ಲಿನ ಮಂಟಪ ಮುಳುಗಡೆಯಾಗಿತ್ತು.
ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ತುರ್ತು ಸಹಾಯಕ್ಕೆ 180042 57677 ಸಂಪರ್ಕಿಸುವಂತೆ ಕೋರಲಾಗಿದೆ.
ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಡ್ಯಾಂಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿ ಇದ್ದು, 1762.10 ಅಡಿಯಷ್ಟು ನೀರು ಸಂಗ್ರಹವಿದೆ. 39,262 ಕ್ಯೂಸೆಕ್ ಒಳಹರಿವು ಇದ್ದು, 903.96 ಕ್ಯೂಸೆಕ್ ಹೊರ ಹರಿವು ಇದೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆಗಿದ್ದು, ಇಂದು 156.6 ಅಡಿ ನೀರಿದೆ. 30167 ಕ್ಯೂಸೆಕ್ ಒಳಹರಿವು ಇದ್ದು, 133 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಕೃಷಿ ಚಟುವಟಿಕೆಗಳು ಕೂಡ ಬಿರುಸು ಪಡೆದುಕೊಂಡಿವೆ.