ಕಳೆದೆರಡು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಮಲೆನಾಡು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಧಾರಾಕಾರ ಮಳೆಯಾಗಿದ್ದು ಕೆರೆ, ಕಟ್ಟೆ, ಹಳ್ಳಕೊಳ್ಳ ನದಿಗಳಿಗೆ ಹೆಚ್ಚಿನ ಪ್ರಮಾಣದ ನೀರು ಬಂದಿದೆ.
ರೈತರ ಕೃಷಿ ಚಟುವಟಿಕೆಗಳು ಮತ್ತಷ್ಟು ಬಿರುಸುಗೊಂಡಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ. ಮುಂಗಾರು ಆರಂಭವಾಗಿದ್ದರೂ ಮಳೆಯ ಪ್ರಮಾಣ ಅಷ್ಟಾಗಿ ಕಂಡು ಬಂದಿರಲಿಲ್ಲ. ಜಿಲ್ಲೆಯ ಅರೆ ಮಲೆನಾಡು ಪ್ರದೇಶಗಳಲ್ಲಿ ಬಿತ್ತನೆ ಕಾರ್ಯದಿಂದ ಭರದಿಂದ ಸಾಗಿದ್ದರೂ ಮಳೆ ಇಲ್ಲದೇ ಬೀಜ ಮೊಳಕೆಯೊಡೆದಿರಲಿಲ್ಲ. ಸಾವಿರಾರು ರೈತರು ಬಿತ್ತಿರುವುದನ್ನು ಅಳಿಸಿ ಮತ್ತೆ ಬಿತ್ತನೆ ಮಾಡಿದ್ದರು. ಇದೀಗ ಮಳೆಯ ಆಗಮನದಿಂದ ತುಸು ನೆಮ್ಮದಿ ತಂದಿದೆ.
ತುಂಗಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದ್ದು, ತುಂಗಾ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿಯಲ್ಲಿ ಹೆಚ್ಚಿನ ಒಳಹರಿವು ಇದ್ದು, ತುಂಗಾ ನದಿಯ ಕಲ್ಲಿನ ಮಂಟಪ ಮುಳುಗುವ ಹಂತಕ್ಕೆ ಬಂದಿದೆ.