ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಜೆಡಿಎಸ್ ತೊರೆಯಲು ಮುಂದಾಗಿರುವ ವೈ.ಎಸ್.ವಿ. ದತ್ತ ಅವರನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ರಾಜ್ಯ ಕಾಂಗ್ರೆಸ್ ನಾಯಕರು ಈ ಕುರಿತಂತೆ ಸ್ಥಳೀಯವಾಗಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿದ್ದು, ಯಡಿಯೂರಪ್ಪ, ಈಶ್ವರಪ್ಪ, ಡಿ.ಎಚ್. ಶಂಕರಮೂರ್ತಿ, ಆಯನೂರು ಮಂಜುನಾಥ್, ಅರಗ ಜ್ಞಾನೇಂದ್ರ ಸೇರಿದಂತೆ ಘಟಾನುಘಟಿ ನಾಯಕರುಗಳಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಅವರನ್ನು ಈ ಬಾರಿ ಮಣಿಸಲೇಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಭಾರಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಹಿಂದೆ ಅದೇ ಸಮುದಾಯದ ಕೆ.ಬಿ. ಪ್ರಸನ್ನ ಕುಮಾರ್ ಈಶ್ವರಪ್ಪ ಅವರನ್ನು ಸೋಲಿಸಿದ್ದರು. ಈ ಮೊದಲು ಸಹ ಬ್ರಾಹ್ಮಣ ಸಮುದಾಯದವರೇ ಆದ ಕೆ.ಎಚ್. ಶ್ರೀನಿವಾಸ್ ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪನವರು ಪ್ರಸನ್ನಕುಮಾರ್ ಅವರನ್ನು ಸೋಲಿಸಿ ಮರು ಆಯ್ಕೆಯಾಗಿದ್ದು, ಹೀಗಾಗಿ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ಪಡೆಯಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ. ತಮ್ಮ ಸರಳ ನಡೆಯಿಂದ ಜನಪ್ರಿಯರಾಗಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವೈ.ಎಸ್.ವಿ. ದತ್ತ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದರೆ ಗೆಲುವು ಸುಲಭವಾಗಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರಲ್ಲಿದೆ. ಈ ಕುರಿತ ಚಿಂತನೆ ಈಗ ಕಾಂಗ್ರೆಸ್ಸಿನಲ್ಲಿ ನಡೆದಿದ್ದು, ಯಾರಿಗೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಎಂಬುದು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.