ಮೇ 10ರಂದು ಮತದಾನ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ ಬಿಜೆಪಿ ಈಗಾಗಲೇ 222 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಶಿವಮೊಗ್ಗ ಹಾಗೂ ಮಾನ್ವಿ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಆಗಬೇಕಿದೆ. ಶಿವಮೊಗ್ಗ ಕ್ಷೇತ್ರದ ಶಾಸಕರಾಗಿದ್ದ ಕೆ.ಎಸ್. ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಕಾರಣ ಇಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಸೋಮವಾರದಂದು ತನ್ನ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದ್ದು, ಇದರಲ್ಲಿ ಮೂವರು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ತಮಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲವೆಂಬದು ಖಚಿತವಾಗುತ್ತಿದ್ದಂತೆಯೇ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರಾಗಿದ್ದ ಜಗದೀಶ್ ಶೆಟ್ಟರ್ ಈಗಾಗಲೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಇನ್ನುಳಿದಂತೆ ಮಹದೇವಪುರದ ಅರವಿಂದ ಲಿಂಬಾವಳಿ ಹಾಗೂ ಕೃಷ್ಣರಾಜ ಕ್ಷೇತ್ರದ ಎ. ರಾಮದಾಸ್ ಅವರಿಗೆ ಟಿಕೆಟ್ ಲಭಿಸಿಲ್ಲ.
ಆದರೆ ಮಹದೇವಪುರ ಕ್ಷೇತ್ರದಲ್ಲಿ ಅರವಿಂದ ಲಿಂಬಾವಳಿ ಬದಲಿಗೆ ಅವರ ಪತ್ನಿ ಮಂಜುಳಾ ಲಿಂಬಾವಳಿ ಅವರಿಗೆ ಟಿಕೆಟ್ ನೀಡಲಾಗಿದ್ದು, ಇದೇ ರೀತಿ ಪಕ್ಷ ಸೂಚಿಸಿದಂತೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಕೆಎಸ್ ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ್ ಅವರಿಗೆ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗಬಹುದೆಂದು ಹೇಳಲಾಗುತ್ತಿದೆ. ಆದರೆ ಇಲ್ಲಿ ಕಾಂಗ್ರೆಸ್ ನಿಂದ ಲಿಂಗಾಯಿತ ಸಮುದಾಯದ ಹೆಚ್.ಸಿ. ಯೋಗೀಶ್ ಅವರಿಗೆ ಟಿಕೆಟ್ ಸಿಕ್ಕಿದ್ದು ಹೀಗಾಗಿ ಖ್ಯಾತ ವೈದ್ಯ ಧನಂಜಯ ಸರ್ಜಿ ಹೆಸರು ಸಹ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಒಂದೊಮ್ಮೆ ಬಿಜೆಪಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕದಿದ್ದ ಪಕ್ಷದಲ್ಲಿ ಕೆ.ಇ. ಕಾಂತೇಶ್ ಬದಲಿಗೆ ಈಶ್ವರಪ್ಪ ಸೂಚಿಸಿದವರಿಗೆ ಟಿಕೆಟ್ ಸಿಗುವ ಸಾಧ್ಯತೆಯೂ ಇದೆ.