ಶಿಕ್ಷಣ ಲಾಭಕ್ಕಾಗಿ ನಡೆಸುವ ಉದ್ಯಮವಲ್ಲ. ಹೀಗಾಗಿ ಅಲ್ಲಿ ವಿಧಿಸುವ ಬೋಧನಾ ಶುಲ್ಕ ವಿದ್ಯಾರ್ಥಿಗಳ ಕೈಗೆಟುಕುವಂತಿರಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣ ಒಂದರ ವಿಚಾರಣೆ ವೇಳೆ ಈ ಮಹತ್ವದ ಅಭಿಪ್ರಾಯ ಹೊರ ಬಿದ್ದಿದ್ದು, ಅಲ್ಲದೆ ವೈದ್ಯಕೀಯ ಶಿಕ್ಷಣದ ಶುಲ್ಕ ಹೆಚ್ಚಳ ಮಾಡಿದ್ದನ್ನು ರದ್ದುಗೊಳಿಸಿದ್ದ ಆಂಧ್ರ ಪ್ರದೇಶ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಎತ್ತಿ ಹಿಡಿದಿದೆ.
ಪ್ರಕರಣದ ವಿವರ: ಆಂಧ್ರ ಪ್ರದೇಶ ಸರ್ಕಾರ ವೈದ್ಯಕೀಯ ಶಿಕ್ಷಣ ಕೋರ್ಸ್ ಗಳ ವಾರ್ಷಿಕ ಬೋಧನಾ ಶುಲ್ಕವನ್ನು 24 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಿತ್ತು. ವಿದ್ಯಾರ್ಥಿಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಯಾವುದೇ ಸಮಿತಿ ಶಿಫಾರಸು ಅಥವಾ ವರದಿ ಇಲ್ಲದೆಯೇ ವೈದ್ಯಕೀಯ ಬೋಧನಾ ಶುಲ್ಕ ಹೆಚ್ಚಳ ಮಾಡಿರುವುದು ಸಮಂಜಸವಲ್ಲ ಎಂದು ಹೇಳಿ ಅದನ್ನು ರದ್ದುಗೊಳಿಸಿತ್ತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಆಂಧ್ರಪ್ರದೇಶ ರಾಜ್ಯ ಸರ್ಕಾರ ಹಾಗೂ ಖಾಸಗಿ ವೈದ್ಯ ಕಾಲೇಜು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಈಗ ಸುಪ್ರೀಂ ಕೂಡಾ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ. ಅಲ್ಲದೆ ಹೈಕೋರ್ಟ್ ತೀರ್ಪು ಪ್ರಶ್ನಿಸಿದ್ದ ಆಂಧ್ರ ಪ್ರದೇಶ ರಾಜ್ಯ ಸರ್ಕಾರ ಮತ್ತು ಖಾಸಗಿ ವೈದ್ಯ ಕಾಲೇಜಿಗೆ ತಲಾ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.