ವಿಶೇಷ ಸಂದರ್ಭಗಳನ್ನು ಸ್ಮರಣೀಯವಾಗಿಸಲು ಕೆಲವರು ಮಹತ್ವದ ಕಾರ್ಯಕ್ಕೆ ಕೈ ಹಾಕುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ತಮಗೆ ಹೆಣ್ಣು ಶಿಶು ಜನಿಸಿದ ಖುಷಿಗಾಗಿ ಕುಟುಂಬ ಒಂದು ಈ ಹಿಂದೆ ಆ ಮಗುವನ್ನು ಹೆಲಿಕಾಪ್ಟರ್ ನಲ್ಲಿ ಮನೆಗೆ ಕರೆ ತಂದಿತ್ತು.
ಮತ್ತೊಂದು ಘಟನೆಯಲ್ಲಿ ವ್ಯಕ್ತಿಯೊಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟ ತಮ್ಮ ಪುತ್ರ ಹಾಗೂ ಸೊಸೆಯನ್ನು ಕರೆತರಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು. ಇದಕ್ಕಾಗಿ ಅವರು ತಮ್ಮ ಗ್ರಾಮದಲ್ಲಿ ಹೆಲಿಪ್ಯಾಡ್ ಸಹ ನಿರ್ಮಿಸಿದ್ದರು. ಇದೀಗ ಮತ್ತೊಂದು ವಿಶೇಷ ಘಟನೆ ನಡೆದಿದೆ.
ಪುತ್ರನೊಬ್ಬ ಶಿಕ್ಷಕಿಯಾಗಿದ್ದ ತನ್ನ ತಾಯಿ ಮೂರು ದಶಕಗಳ ಸೇವೆಯ ಬಳಿಕ ನಿವೃತ್ತಿಗೊಂಡ ವೇಳೆ ಅವರನ್ನು ಮನೆಗೆ ಕರೆ ತರಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದಾರೆ. ಇಂಥದ್ದೊಂದು ಅಪರೂಪದ ಘಟನೆ ರಾಜಸ್ಥಾನದ ಅಜ್ಮೀರ್ ನಲ್ಲಿ ನಡೆದಿದೆ.
ಸುಶೀಲಾ ಚೌಹಾನ್ ಎಂಬ ಶಿಕ್ಷಕಿ ಶನಿವಾರದಂದು ಪಿಸನ್ ಗನ್ ಕೇಸರ್ಪುರ್ ಪ್ರೌಢಶಾಲೆಯಲ್ಲಿ ತಮ್ಮ ಕೆಲಸದ ಕೊನೆಯ ದಿನವನ್ನು ಪೂರ್ಣಗೊಳಿಸಿದ್ದಾರೆ. ಅವರಿಗೆ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದ್ದು, ಬಳಿಕ ಅವರ ಪುತ್ರ ಯೋಗೇಶ್ ಚೌಹಾನ್ ಶಾಲೆಯ ಮುಂದೆ ಹೆಲಿಕಾಪ್ಟರ್ ಇಳಿಸಿ ಬಳಿಕ ತಮ್ಮ ತಾಯಿಯನ್ನು ಅದರಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.