ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿ ಪ್ರೀತಿಯ ಬಲೆಗೆ ಬಿದ್ದಿದ್ದು, ಆಕೆಯ ವಿವಾಹ ಮತ್ತೊಬ್ಬರೊಂದಿಗೆ ನಿಶ್ಚಯಗೊಂಡ ಬಳಿಕ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳೆಂಬ ಕ್ಷುಲ್ಲಕ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಅಂಬತ್ತೂರಿನ ಖಾಸಗಿ ಕಾಲೇಜಿನಲ್ಲಿ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ನೇಣಿಗೆ ಶರಣಾದವನಾಗಿದ್ದು, ಈತ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾಗ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶರ್ಮಿಳಾ ಎಂಬಾಕೆಯೊಂದಿಗೆ ತುಂಬಾ ಸಲುಗೆಯಿಂದ ಇದ್ದ ಎನ್ನಲಾಗಿದೆ. ಅಲ್ಲದೆ ಆಕೆಯ ಮನೆಗೆ ಈತ ಟ್ಯೂಷನ್ ಗೂ ಹೋಗುತ್ತಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.
ಇತ್ತೀಚೆಗೆ ಶಿಕ್ಷಕಿಯ ವಿವಾಹ ನಿಶ್ಚಯವಾಗಿದ್ದು, ಹೀಗಾಗಿ ಆಕೆ ವಿದ್ಯಾರ್ಥಿಯೊಂದಿಗೆ ಮಾತನಾಡುವುದನ್ನು ಕಡಿತಗೊಳಿಸಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಪುತ್ರನ ಸಾವಿನ ಕುರಿತು ಅನುಮಾನ ಹೊಂದಿದ್ದ ಪೋಷಕರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಮೊಬೈಲ್ ಪರಿಶೀಲಿಸಿದಾಗ ಬೆಚ್ಚಿ ಬೀಳಿಸುವ ಸಂಗತಿ ಬಹಿರಂಗವಾಗಿದೆ. ಶಿಕ್ಷಕಿ ಜೊತೆಗಿರುವ ವಿದ್ಯಾರ್ಥಿಯ ಹಲವು ಫೋಟೋಗಳು ಇದರಲ್ಲಿದ್ದು, ಸಂದೇಶಗಳೂ ವಿನಿಮಯವಾಗಿದ್ದವು. ಇದೀಗ ಪೊಲೀಸರು ಶಿಕ್ಷಕಿ ಶರ್ಮಿಳಾ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.