21 ವರ್ಷದ ಶಿಕ್ಷಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಅಡಿಯಲ್ಲಿ ಮುಂಬೈನ ರಾಯಗಢ ಜಿಲ್ಲೆಯ ತಲೋಜಾದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಶಿಕ್ಷಕಿ ಗುಜರಾತ್ ಮೂಲದವರು ಎಂದು ತಿಳಿದು ಬಂದಿದೆ. ಬಂಧಿತರನ್ನು 21 ವರ್ಷದ ಅಯುಬ್ ಇದ್ರಿಸ್ ಖಾನ್ ಹಾಗೂ ಶಬ್ಬಾಸ್ ಜಹಿರ್ ಅಲಿ ಎಂದು ಗುರುತಿಸಲಾಗಿದೆ.
ಸಂತ್ರಸ್ತೆ ಐದು ತಿಂಗಳ ಹಿಂದೆ ಈ ಆರೋಪಿಗಳ ಪೈಕಿ ಒಬ್ಬಾತನ ಜೊತೆಯಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಸ್ನೇಹ ಬೆಳೆಸಿದ್ದರು ಎನ್ನಲಾಗಿದೆ. ಇಬ್ಬರೂ ಒಬ್ಬರಿಗೊಬ್ಬರು ಚಾಟ್ ಮಾಡಿಕೊಳ್ಳುತ್ತಿದ್ದರು. ಅಯುಬ್ ಇದ್ರಿಸ್ ಖಾನ್ ಶಿಕ್ಷಕಿಯನ್ನು ಬರ್ತ್ಡೇ ಪಾರ್ಟಿಯ ನೆಪದಲ್ಲಿ ಮೊಟ್ಟ ಮೊದಲ ಬಾರಿಗೆ ಭೇಟಿಯಾಗಲು ಆಹ್ವಾನಿಸಿದ್ದನು ಎನ್ನಲಾಗಿದೆ.
ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ಬಂದಿಳಿದ ಸಂತ್ರಸ್ತೆಯನ್ನು ಭೇಟಿಯಾದ ಆರೋಪಿಯು ಆಕೆಯನ್ನು ಟ್ಯಾಕ್ಸಿಯ ಮೂಲಕ ತಲೋಜಾಗೆ ಕರೆತಂದನು ಎಂದು ಪೊಲೀಸ್ ಅಧಿಕಾರಿ ಗಿರಿಧರ್ ಗೋರೆ ಹೇಳಿದರು.
ಸಂತ್ರಸ್ತೆಯನ್ನು ತನ್ನ ಸ್ನೇಹಿತ ಶಬ್ಬಾಸ್ ಜಹಿರ್ ಅಲಿಯ ಫ್ಲ್ಯಾಟ್ಗೆ ಕರೆದೊಯ್ದ ಅಯುಬ್ ಕುಡಿಯಲು ಬಿಯರ್ ನೀಡಿದ್ದಾನೆ. ಇದನ್ನು ಕುಡಿದ ಬಳಿಕ ಅಯುಬ್ ಇದ್ರಿಸ್ ಖಾನ್ ಶಿಕ್ಷಕಿಯ ಮೇಲೆ ಅತ್ಯಾಚಾರ ಎಸಗಿದ್ದರೆ ಶಬ್ಬಾಸ್ ಜಹಿರ್ ಅಲಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಹೇಗೋ ಇಬ್ಬರು ಆರೋಪಿಗಳ ಕೈನಿಂದ ತಪ್ಪಿಸಿಕೊಂಡ ಸಂತ್ರಸ್ತೆಯು ಫ್ಲ್ಯಾಟ್ನಿಂದ ಹೊರಗೋಡಿ ಬಂದಿದ್ದಾಳೆ. ಕೂಡಲೇ ಪೊಲೀಸರಿಗೆ ಕರೆ ಮಾಡಿದ ಶಿಕ್ಷಕಿಯು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ದೂರು ದಾಖಲಾದ ಬಳಿಕ ಆರೋಪಿಗಳು ತಮ್ಮ ಮೂಲ ರಾಜ್ಯವಾದ ಮಧ್ಯ ಪ್ರದೇಶಕ್ಕೆ ತೆರಳಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪೊಲೀಸರು ಅವರನ್ನು ಬಂಧಿಸಿದ್ದಾರೆ.