ಕೊರೊನಾ ಕಾರಣಕ್ಕೆ ಕಳೆದ ಒಂದೂವರೆ ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿತ್ತು. ಇದೀಗ ಕೊರೊನಾ ಇಳಿಮುಖವಾಗುತ್ತಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿದ್ದು, ಶಾಲಾ -ಕಾಲೇಜುಗಳು ವಿದ್ಯಾರ್ಥಿಗಳಿಂದ ಗಿಜಿಗುಟ್ಟುತ್ತಿವೆ. ಶಿಕ್ಷಕ – ಶಿಕ್ಷಕಿಯರು ಸಹ ಸಂಭ್ರಮದಿಂದ ಶಾಲೆಗಳಿಗೆ ತೆರಳುತ್ತಿದ್ದಾರೆ. ಇದರ ಮಧ್ಯೆ ಶಿಕ್ಷಕಿಯರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ಶಿಶುಪಾಲನಾ ರಜೆ ನೀಡಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಹೀಗಾಗಿ ಇನ್ನು ಮುಂದೆ ಶಿಕ್ಷಕಿಯರಿಗೆ ಶಿಶುಪಾಲನಾ ರಜೆ ಸೌಲಭ್ಯ ಲಭ್ಯವಾಗಲಿದೆ. ರಾಜ್ಯ ಸರ್ಕಾರದ ಮಹಿಳಾ ನೌಕರರಿಗೆ ಅನ್ವಯವಾಗುವ ನಿಯಮ ಈಗ ಶಿಕ್ಷಕಿಯರಿಗೂ ಅನ್ವಯವಾಗಲಿದೆ.
ಬುದ್ಧಿಮಾಂದ್ಯ ಮತ್ತು ವಿಶೇಷ ಚೇತನ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರ ಶಿಶುಪಾಲನ ರಜೆಯನ್ನು ಮಂಜೂರು ಮಾಡಿದ್ದು, ಇದು ಇತರ ಇಲಾಖೆಗಳ ಮಹಿಳಾ ನೌಕರರಿಗೆ ಅನ್ವಯವಾಗಿದ್ದರೂ ಸಹ ಸಾರ್ವಜನಿಕ ಶಿಕ್ಷಣ ಇಲಾಖೆ ಇದನ್ನು ಜಾರಿಗೊಳಿಸಿರಲಿಲ್ಲ. ಇದೀಗ ಆರ್ಥಿಕ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಿರುವ ಹಿನ್ನೆಲೆಯಲ್ಲಿ ಶಿಕ್ಷಕಿಯರಿಗೂ ಸಹ ಈ ಸೌಲಭ್ಯ ಲಭ್ಯವಾಗಲಿದೆ.