ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದು, ವಿಧಾನಸಭಾ ಚುನಾವಣೆಗೆ ಕೇವಲ 11 ತಿಂಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಅವರ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಅಲ್ಲದೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದು, ಮುಂಬರುವ ಚುನಾವಣೆ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಲವು ‘ಬದಲಾವಣೆ’ ಗಳ ಕುರಿತು ಮಾತನಾಡಿದ್ದರ ಹಿನ್ನೆಲೆಯಲ್ಲಿ ನಾಯಕತ್ವ ಸೇರಿದಂತೆ ಸಚಿವ ಸಂಪುಟ ಹಾಗೂ ಬಿಜೆಪಿ ಪದಾಧಿಕಾರಿಗಳ ಬದಲಾವಣೆಯ ಮಾತುಗಳು ಕೇಳಿ ಬಂದಿದ್ದರೂ ಸಹ ಇದು ಸದ್ಯಕ್ಕೆ ಆಗುವ ಸಾಧ್ಯತೆ ಇಲ್ಲವೆಂದು ಹೇಳಲಾಗಿದೆ.
ಜೊತೆಗೆ ವಿಧಾನಸಭಾ ಚುನಾವಣೆಗೆ ಕೇವಲ ಹನ್ನೊಂದು ತಿಂಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳಲ್ಲೂ ಸಹ ಅಷ್ಟೊಂದು ಉತ್ಸಾಹ ಇಲ್ಲವೆನ್ನಲಾಗಿದ್ದು, ಹೀಗಾಗಿ ಸಂಪುಟ ವಿಸ್ತರಣೆಯು ಸಹ ಸದ್ಯಕ್ಕಿಲ್ಲವೆಂದು ಹೇಳಲಾಗಿದೆ. ಆದರೆ 70 ವರ್ಷ ಮೀರಿದವರಿಗೆ ಟಿಕೆಟ್ ಇಲ್ಲವೆಂಬ ನಿಯಮ ಹಲವು ಹಿರಿಯ ನಾಯಕರಲ್ಲಿ ಕಸಿವಿಸಿ ಉಂಟು ಮಾಡಿದ್ದು, ಹೀಗಾಗಿ ಕಡೆಪಕ್ಷ ತಮ್ಮ ಕುಟುಂಬ ಸದಸ್ಯರಿಗಾದರೂ ಟಿಕೆಟ್ ಕೊಡಿಸಲು ಅಮಿತ್ ಶಾ ಅವರ ಬಳಿ ಮನವಿ ಮಾಡುವ ಸಾಧ್ಯತೆ ಇದೆ.