ಭೋಪಾಲ್ (ಮಧ್ಯಪ್ರದೇಶ): ವಿಜಯಪುರದ ಬಿಜೆಪಿ ಶಾಸಕ ಸೀತಾರಾಮ್ ಆದಿವಾಸಿ ವಿರುದ್ಧ ಆತನ ಸೊಸೆಯೇ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳ ಸಂಬಂಧ ಮಹಿಳಾ ಠಾಣಾ ಶಿಯೋಪುರದಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಶಾಸಕನ ವಿರುದ್ಧ ದೂರು ದಾಖಲಿಸಿದ ಸೊಸೆ ಕೃಷ್ಣ ಆದಿವಾಸಿ. ಪೊಲೀಸರು ದೂರು ತೆಗೆದುಕೊಂಡಿದ್ದು, ಶಾಸಕರ ಒತ್ತಡಕ್ಕೆ ಮಣಿದು ಎಫ್ಐಆರ್ ದಾಖಲಿಸುತ್ತಿಲ್ಲ. ಇಡೀ ಕುಟುಂಬ ಕಿರುಕುಳ ನೀಡುತ್ತಿದ್ದು, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
2013 ರಲ್ಲಿ ಶಾಸಕರ ಮಗ ಧನರಾಜ್ ಅವರನ್ನು ಕೃಷ್ಣ ಅದಿವಾಸಿ ವಿವಾಹವಾಗಿದ್ದರು. 2013ರಲ್ಲಿ ಅಕ್ಷಯ ತೃತಿಯ ದಿನದಂದು ನಡೆದ ನನ್ನ ಮಗಳ ಮದುವೆಯಲ್ಲಿ ನಾವು ನಮ್ಮ ಕೈಲಾದಷ್ಟು ನೀಡಿದ್ದೇವೆ. ಆದರೂ ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಇದೀಗ ಪಲ್ಸರ್ ಬೈಕ್ ಕೊಡಿಸುವಂತೆ ಹೇಳುತ್ತಿದ್ದು, ಆಕೆಯಿಂದ ಮನೆಯಿಂದ ಹೊರಗೆ ಕಳುಹಿಸಿದ್ದಾರೆ. ಅಂದಿನಿಂದ ತವರು ಮನೆಯಲ್ಲೇ ಇದ್ದಾಳೆ ಎಂದು ತಂದೆ ಸುರೇಶ್ ಆದಿವಾಸಿ ಅಳಲು ತೋಡಿಕೊಂಡಿದ್ದಾರೆ.
ಮೇ 4 ರಂದು ಪತಿ ಧನರಾಜ್ ಬೇರೊಬ್ಬ ಮಹಿಳೆಯನ್ನು ಮದುವೆಯಾಗಲಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪೊಲೀಸರ ಬಳಿ ದೂರು ದಾಖಲಿಸಿದ್ದೇವೆ. ನನ್ನ ಪತಿ, ಆತನ ತಂದೆ ಮತ್ತು ಕುಟುಂಬ ಸದಸ್ಯರೊಂದಿಗೆ ಬಂದು ಒಂದು ಲಕ್ಷ ಬೆಲೆಬಾಳುವ ಪಲ್ಸರ್ ಬೈಕ್ ನೀಡದಿದ್ದರೆ ಬೇರೊಂದು ಮದುವೆಯಾಗುತ್ತೇನೆ. ತಂದೆ ಅಧಿಕಾರದಲ್ಲಿರುವುದರಿಂದ ಪೊಲೀಸರು ತಮ್ಮ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದರು ಎಂದು ವಿವರಿಸಿದ್ದಾರೆ.
ಪೊಲೀಸರು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದು, ಆರೋಪಗಳನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ, ಶಿಯೋಪುರ, ಪ್ರೇಮಲಾಲ್ ಕುರ್ವೆ ತಿಳಿಸಿದ್ದಾರೆ.