ಶಿಕ್ಷಕ ವೃತ್ತಿ ಪವಿತ್ರವಾದದ್ದು. ಭವಿಷ್ಯದ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಶಿಕ್ಷಕ ಸಮುದಾಯ ಹೊಂದಿದೆ. ಆದರೆ ಕೆಲ ಶಿಕ್ಷಕರು ತಾವು ಮಾಡುವ ಕೆಲಸದಿಂದಾಗಿ ಈ ವೃತ್ತಿಗೆ ಕಳಂಕ ತರುತ್ತಿದ್ದಾರೆ.
ಈ ಹಿಂದೆ ವಿದ್ಯಾರ್ಥಿಗಳಿಂದ ಶಿಕ್ಷಕರೊಬ್ಬರು ಮನೆ ಕೆಲಸ ಮಾಡಿಸಿಕೊಂಡ ವಿಡಿಯೋ ವೈರಲ್ ಆಗಿತ್ತು. ಈಗ ಅಂತಹುದೇ ಪ್ರಕರಣವೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಿತಾಯಿಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿಯೊಬ್ಬರು ಶಾಲೆಯಲ್ಲೇ ಗಡದ್ದಾಗಿ ನಿದ್ರೆ ಹೊಡೆದಿದ್ದಾರೆ. ಇದು ಸಾಲದೆಂಬಂತೆ ಈ ಶಿಕ್ಷಕಿ ತನಗೆ ಗಾಳಿ ಬೀಸಲು ವಿದ್ಯಾರ್ಥಿನಿಯೊಬ್ಬಳಿಗೆ ಸೂಚಿಸಿದ್ದಾರೆ.
ಶಿಕ್ಷಕಿಗೆ ಅರಿವಾಗದಂತೆ ವ್ಯಕ್ತಿಯೊಬ್ಬರು ಇದರ ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇದು ವೈರಲ್ ಆದ ಬಳಿಕ ಶಿಕ್ಷಣಾಧಿಕಾರಿಗಳು ಘಟನೆಯ ತನಿಖೆಗೆ ಆದೇಶಿಸಿದ್ದಾರೆ.