
ಚಾಮರಾಜನಗರ: 10ನೇ ತರಗತಿ ಓದುತ್ತಿರುವ 15 ವರ್ಷದ ಬಾಲಕಿ ಗರ್ಭಿಣಿಯಾಗಿದ್ದು, ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.
ವಿದ್ಯಾರ್ಥಿನಿ ಶುಕ್ರವಾರ ಶಾಲೆಯಲ್ಲಿ ವಾಂತಿ ಮಾಡಿಕೊಂಡಿದ್ದು, ಮುಖ್ಯ ಶಿಕ್ಷಕ ಮತ್ತು ಬಾಲಕಿಯ ಪೋಷಕರು ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ತಪಾಸಣೆ ನಡೆಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.
ಪಟ್ಟಣದಲ್ಲಿರುವ ಸಂಬಂಧಿಕರ ಮನೆಯಲ್ಲಿ ಬಾಲಕಿ ವಾಸವಾಗಿದ್ದು, ತಾಯಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ರಿಸ್ಮಸ್ ರಜೆಯ ಸಂದರ್ಭದಲ್ಲಿ ಬಾಲಕಿ ಬೆಂಗಳೂರಿಗೆ ಹೋಗಿದ್ದಾಗ ಮನೆಯ ಸಮೀಪ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದು, ಘಟನೆ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ಬಗ್ಗೆ ನೊಂದ ಬಾಲಕಿ ದೂರು ನೀಡಿದ್ದಾಳೆ. ಕೊಳ್ಳೇಗಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ.