ಕೊಪ್ಪಳ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ವೃದ್ಧಿಗಾಗಿ ಸರ್ಕಾರವು ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುವ ಯೋಜನೆ ಜಾರಿಗೊಳಿಸಿತ್ತು. ಆದರೆ, ಇದಕ್ಕೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾರಣ, ಅಕ್ಷರ ದಾಸೋಹ ಅಧಿಕಾರಿಗಳು ಮೊಟ್ಟೆ ತಿನ್ನುವ ಕುರಿತು ಸಮೀಕ್ಷೆ ನಡೆಸಿದ್ದರು.
ವಿದ್ಯಾರ್ಥಿಗಳು ಮೊಟ್ಟೆ ತಿನ್ನುವ ಕುರಿತು ಈ ಸಮೀಕ್ಷೆ ನಡೆದಿತ್ತು. ಸಮೀಕ್ಷೆಯ ವರದಿಯಂತೆ, ಬಹುಪಾಲು ವಿದ್ಯಾರ್ಥಿಗಳು ಸರ್ಕಾರದ ಯೋಜನೆಯನ್ನು ಇಷ್ಟಪಟ್ಟಿದ್ದಾರೆ. ಸರ್ಕಾರ ನೀಡುತ್ತಿರುವ ಮೊಟ್ಟೆಯನ್ನು ತಮ್ಮ ಮಧ್ಯಾಹ್ನದ ಬಿಸಿಯೂಟದೊಂದಿಗೆ ತಿನ್ನುತ್ತಿದ್ದು, ಈ ಯೋಜನೆಗೆ ಮಕ್ಕಳಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.
ಸಿಎಂಗೆ ತಟ್ಟಿದ ವಿದ್ಯಾರ್ಥಿಗಳ ಪ್ರತಿಭಟನೆ ಬಿಸಿ…! ಬೇಡಿಕೆ ಈಡೇರಿಸಲು ಒತ್ತಾಯಿಸಿ ಕಾರಿಗೆ ಮುತ್ತಿಗೆ
ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ 1,67,111 ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದು, ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಾರೆ. ಈ ಪೈಕಿ ಕೇವಲ ಶೇ. 7ರಷ್ಟು ವಿದ್ಯಾರ್ಥಿಗಳು ಮೊಟ್ಟೆ ತ್ಯಜಿಸಿ ಬಾಳೆಹಣ್ಣು ತಿನ್ನುತ್ತಿದ್ದರೆ, ಬರೋಬ್ಬರಿ ಶೇ.93ರಷ್ಟು ವಿದ್ಯಾರ್ಥಿಗಳು ಮೊಟ್ಟೆ ತಿನ್ನುತ್ತಿದ್ದಾರೆ. ಅಲ್ಲದೇ, ನಾವು ಮೊಟ್ಟೆ ತಿನ್ನುತ್ತೇವೆ, ನಮಗೆ ಮೊಟ್ಟೆಯೇ ಬೇಕು ಎಂದು ಹೇಳಿದ್ದಾರೆ.
ಈ ಯೋಜನೆಯನ್ನು ಸರ್ಕಾರ ಪ್ರಾರಂಭಿಸುತ್ತಿದ್ದಂತೆ ಹಲವು ಮಠಾಧೀಶರು ಸೇರಿದಂತೆ ಒಂದಷ್ಟು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ, ಶಾಲೆಗಳಲ್ಲಿ ಮೊಟ್ಟೆಗಳನ್ನು ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದರು. ಹಲವು ವಿದ್ಯಾರ್ಥಿಗಳು ನಮಗೆ ಮೊಟ್ಟೆಯೇ ಬೇಕು ಎಂದು ಬಹಿರಂಗವಾಗಿ ಹೇಳಿದ್ದರು. ಸದ್ಯ ವಿದ್ಯಾರ್ಥಿಗಳೇ ಮೊಟ್ಟೆಯನ್ನು ಆಯ್ಕೆ ಮಾಡಿಕೊಂಡಂತಾಗಿದೆ.