ಬೆಂಗಳೂರು: ಕೋವಿಡ್ ಕಾರಣದಿಂದಾಗಿ ಕಳೆದ ಒಂದುವರೆ ವರ್ಷದಿಂದ ಮನೆಯಲ್ಲಿಯೆ ಕಾಲ ಕಳೆದಿದ್ದ ಮಕ್ಕಳಿಗೆ ಶಾಲೆ, ಪಾಠ, ಪ್ರವಚನಗಳು ಮರೆತು ಹೋಗುವ ಸ್ಥಿತಿ ಬಂದಿದೆ. ಇದೀಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶೀಘ್ರದಲ್ಲಿ ಶಾಲೆ ಪುನರಾರಂಭ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವರು, ಶಾಲೆ ಪುನರಾರಂಭದ ಬಗ್ಗೆ ತಜ್ಞರು, ಶಿಕ್ಷಕರು ಹಾಗೂ ಪೋಷಕರ ಜೊತೆ ಸಭೆ ನಡೆಸಲಾಗಿದ್ದು, ಆರೋಗ್ಯ ಇಲಾಖೆಯ ಸಹಮತವನ್ನೂ ಪಡೆಯಲಾಗುತ್ತಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಶಾಲೆಗಳನ್ನು ತೆರೆಯುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.