ಬೆಲೆ ಏರಿಕೆ ಬಿಸಿ ಶಾಲಾ ಮಕ್ಕಳಿಗೂ ತಟ್ಟಿದೆ. ಸರ್ಕಾರ ಕೊಡ್ತಿರೋ ಅಲ್ಪ ಮೊತ್ತದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮಧ್ಯಾಹ್ನದೂಟ ಒದಗಿಸೋದು ಶಾಲೆಗಳಿಗೆ ಕಷ್ಟವಾಗ್ತಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳಿಗೆ ಕೂಡ ಪೋಷಕಾಂಶವುಳ್ಳ ಆಹಾರ ಸಿಗಬೇಕು ಅನ್ನೋ ಕಾರಣಕ್ಕೆ ಮಧ್ಯಾಹ್ನದೂಟವನ್ನು ಪರಿಚಯಿಸಲಾಗಿತ್ತು.
ಆದ್ರೀಗ ಬೇಳೆ ಕಾಳು, ಅಕ್ಕಿ, ಎಣ್ಣೆ, ತರಕಾರಿ ಪ್ರತಿಯೊಂದು ವಸ್ತುವೂ ದುಬಾರಿಯಾಗಿದೆ. ಸರ್ಕಾರದಿಂದ ಅಲ್ಪ ಅನುದಾನ ಶಾಲೆಗಳಿಗೆ ಬರ್ತಾ ಇದೆ. ಆ ಹಣದಲ್ಲಿ ಮಕ್ಕಳಿಗೆ ಒಳ್ಳೆಯ ಊಟ ಹಾಕೋದು ಕಷ್ಟ ಎನ್ನುತ್ತಿವೆ ಶಾಲಾ ಆಡಳಿತ ಮಂಡಳಿಗಳು. ಸರ್ಕಾರ ಕೊಡುವ ಹಣ ಮಕ್ಕಳ ಮಧ್ಯಾಹ್ನದ ಊಟಕ್ಕೆ ಸಾಲುತ್ತಿಲ್ಲ.
ಲೆಕ್ಕ ಹಾಕಿ ನೋಡಿದ್ರೆ ಮಧ್ಯಾಹ್ನದ ಊಟಕ್ಕಾಗಿ ಸರ್ಕಾರ ಕೊಡ್ತಿರೋದು ಒಬ್ಬ ವಿದ್ಯಾರ್ಥಿಗೆ ಕೇವಲ 4 ರೂಪಾಯಿ 97 ಪೈಸೆ ಮಾತ್ರ. ಆದ್ರೀಗ ಒಂದು ಮೊಟ್ಟೆಯ ಬೆಲೆಯೇ 6 ರೂಪಾಯಿ. ಅಂಥದ್ರಲ್ಲಿ ಬೇಳೆ, ಅಕ್ಕಿ, ತರಕಾರಿ ತಂದು ಅಡುಗೆ ಮಾಡಲು ಹಣ ಎಲ್ಲಿಂದ ತರೋಣ ಅನ್ನೋದು ಶಿಕ್ಷಕರ ಪ್ರಶ್ನೆ.
ಅಡುಗೆ ಮಾಡಲು ಗ್ಯಾಸ್‌ಬೇಕು, ಒಂದು ಎಲ್‌ಪಿಜಿ ಸಿಲಿಂಡರ್ ಬೆಲೆ ಸಾವಿರ ರೂಪಾಯಿಗೆ ತಲುಪಿದೆ. ಈ ವೆಚ್ಚವನ್ನೆಲ್ಲ ಭರಿಸಲಾಗದೇ ಶಾಲೆಗಳಲ್ಲಿ ಮೊಟ್ಟೆ, ಮೀನಿನಂತಹ ಪದಾರ್ಥಗಳನ್ನು ಮಕ್ಕಳಿಗೆ ಕೊಡ್ತಾ ಇಲ್ಲ. ಕೇವಲ ತರಕಾರಿ ಸಾಂಬಾರ್ ಅನ್ನ ಮಾತ್ರ ವಿತರಿಸಲಾಗ್ತಿದೆ.
ಕೆಲವು ಶಾಲೆಗಳಲ್ಲಂತೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಸರ್ಕಾರದಿಂದ ಅಲ್ಪ ಮೊತ್ತ ಬರ್ತಾ ಇರೋದ್ರಿಂದ ಶಿಕ್ಷಕರೇ ತಮ್ಮ ಕೈಯ್ಯಿಂದ ಹಣ ಹಾಕಿ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡ್ತಿದ್ದಾರೆ.