ತುಮಕೂರು: ದಸರಾ ಬಳಿಕ ಶಾಲೆಗಳಲ್ಲಿ ಬಿಸಿಯೂಟ ಪುನರಾರಂಭವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದರು. ಅದರಂತೆ ಮುಂದಿನ ವಾರದಿಂದ ಬಿಸಿಯೂಟ ಆರಂಭವಾಗಲಿದ್ದು, ಆದರೆ ಶಿಕ್ಷಣ ಸಚಿವರ ಸ್ವಕ್ಷೇತ್ರದಲ್ಲೇ ಅಕ್ಷರ ದಾಸೋಹ ಆಹಾರ ಪದಾರ್ಥಗಳಲ್ಲಿ ಹುಳುಗಳು ಪತ್ತೆಯಾಗಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಸ್ವಕ್ಷೇತ್ರ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಲೆಯಲ್ಲಿ ನೀಡಲಾಗಿದ್ದ ಅಕ್ಕಿ ಹಾಗೂ ಬೇಳೆಯಲ್ಲಿ ವಿಪರೀತ ಹುಳುಗಳು ಪತ್ತೆಯಾಗಿವೆ. ಇಂತಹ ಆಹಾರಧಾನ್ಯಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಇದನ್ನು ನಾವು ತಿನ್ನುವುದಾದರೂ ಹೇಗೆ? ಎಂದು ವಿದ್ಯಾರ್ಥಿನಿಯೋರ್ವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾre.
ಆಹಾರದಲ್ಲಿ ಹುಳುಗಳಿರುವ ಬಗ್ಗೆ ಶಾಲೆಯಲ್ಲಿ ಕೇಳಿದರೆ ಮನೆಗೆ ತೆಗೆದುಕೊಂಡು ಹೋಗಿ ದನಗಳಿಗೆ ಕೊಡಿ ಎನ್ನುತ್ತಿದ್ದಾರೆ. ಮುಂದಿನ ವಾರದಿಂದ ಬಿಸಿಯೂಟ ಆರಂಭವಾದರೆ ಇಂತಹ ಕಳಪೆ ಗುಣಮಟ್ಟದ ಊಟ ನೀಡಿದರೆ ಮಕ್ಕಳು ಊಟ ಮಾಡುವುದಾದರೂ ಹೇಗೆ? ಶಿಕ್ಷಣ ಸಚಿವರು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.