ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ನಲುಗಿ ಹೋಗಿದ್ದ ಶೈಕ್ಷಣಿಕ ವಲಯ ಸೋಮವಾರದಿಂದ ಮತ್ತೆ ನಳನಳಿಸುತ್ತಿದೆ. 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೇ 16 ರ ಸೋಮವಾರದಿಂದ ಪೂರ್ಣಪ್ರಮಾಣದಲ್ಲಿ ಶಾಲೆ ಆರಂಭವಾಗಿದ್ದು, ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ತೆರಳಿದ್ದಾರೆ.
ಮೊದಲ ದಿನ ಶಿಕ್ಷಕರು ಮತ್ತು ಸಿಬ್ಬಂದಿ ವಿದ್ಯಾರ್ಥಿಗಳನ್ನು ಗುಲಾಬಿ ಹೂವು, ಪುಸ್ತಕ ಹಾಗೂ ಸಿಹಿತಿಂಡಿ ನೀಡಿ ಬರಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಠ ಪ್ರವಚನದಲ್ಲಿ ಭಾಗಿಯಾಗಿದ್ದಾರೆ. ಇದರ ಮಧ್ಯೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೈಸಿಕಲ್ ನೀಡುವ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, ಇನ್ನು ಪಠ್ಯಪುಸ್ತಕ ಶೇಕಡ 60ರಷ್ಟು ಮುದ್ರಣವಾಗಿದೆ ಎನ್ನಲಾಗಿದ್ದು, ಶೇಕಡ 40ರಷ್ಟು ಪಠ್ಯಪುಸ್ತಕ ಒಂದು ತಿಂಗಳಲ್ಲಿ ಮುದ್ರಣವಾಗಿ ಸರಬರಾಜಾಗಲಿದೆ ಎಂದು ತಿಳಿದುಬಂದಿದೆ.