ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಕಿಡಿಕಾರಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ಖಾಸಗಿ ಶಾಲೆಗಳ ಅಕ್ರಮ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿಯೇ ನಡೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಖಾಸಗಿ ಸಿಬಿಎಸ್‌ಸಿ ಶಾಲೆಗಳ ಆರಂಭಕ್ಕೆ NOC ನೀಡಲು ನಿಯಮಗಳನ್ನೇ ರೂಪಿಸದೆ, ಅನಧಿಕೃತವಾಗಿ ಹಲವು ಶಾಲೆಗಳನ್ನು ಆರಂಭಿಸಲು ಅವಕಾಶ ಮಾಡಿಕೊಟ್ಟು, ಅಕ್ರಮಕ್ಕೆ ಕುಮ್ಮಕ್ಕು ನೀಡಿರುವುದರಲ್ಲಿ ಸಿದ್ದರಾಮಯ್ಯ ಪಾತ್ರವೇನು ಎಂದು ಕೇಳಿದ್ದಾರೆ.
ಪಾರದರ್ಶಕ, ಪ್ರಾಮಾಣಿಕ, ಸುರಕ್ಷಿತ ಶೈಕ್ಷಣಿಕ ವಾತಾವರಣ ನಿರ್ಮಿಸಲು ಹೊರಟ ಬಿಜೆಪಿ ಸರ್ಕಾರದ ವಿರುದ್ಧ, ಕ್ರಿಮಿನಲ್ ಕೇಸ್ ಸೇರಿ ಹಲವು ಆರೋಪಗಳಿರುವ ಬೆಂಬಲಿಗನ ಮೂಲಕ ಆಧಾರರಹಿತ ಆರೋಪಗಳನ್ನು ಮಾಡಿಸಿ, ನಿಯಮಬಾಹಿರ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಿರುವ ಸಿದ್ದರಾಮಯ್ಯನವರಿಗೆ ಮಾತನಾಡಲು ಯಾವ ನೈತಿಕತೆ ಇದೆ? ನಿಯಮಬಾಹಿರ ಕೆಲಸಗಳಲ್ಲಿ ಅವರ ಪಾಲೆಷ್ಟು? ಎಂದು ಪ್ರಶ್ನಿಸಿದ್ದಾರೆ.
2004ರಲ್ಲಿ ತಮಿಳುನಾಡಿನ ಕುಂಭಕೋಣಂನ ಶಾಲೆಯೊಂದರಲ್ಲಿ ನಡೆದ ಅಗ್ನಿದುರಂತದ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುಪ್ರೀಂಕೋರ್ಟ್ ಆದೇಶದ ಅನುಸಾರ ರೂಪಿಸಿರುವ ನಿಯಮಗಳು, ಮಾರ್ಗಸೂಚಿಗಳನ್ನೇ ನೀವು ಪ್ರಶ್ನಿಸುತ್ತಿದ್ದೀರಿ! ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಸಿದ್ದರಾಮಯ್ಯನವರೇ ನಿಮಗೆ ಕಾಳಜಿ ಇಲ್ಲವೇ? ಎಂದು ಕೇಳುವ ಮೂಲಕ ತಿರುಗೇಟು ನೀಡಿದ್ದಾರೆ.