ಶಿವಮೊಗ್ಗ: ಸರ್ಕಾರಿ ಮತ್ತು ಅನುದಾನಿತ ಶಾಲೆಯ ಒಂದರಿಂದ ಎಂಟನೇ ತರಗತಿ ಮಕ್ಕಳ ಬ್ಯಾಂಕ್ ಖಾತೆಗೆ ಬಿಸಿಯೂಟದ ಬಾಬ್ತು ಜಮಾ ಮಾಡಲಾಗುವುದು. ಕೊರೋನಾ ಕಾರಣದಿಂದ ಶಾಲೆಗಳು ಸರಿಯಾಗಿ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಕ್ಕಿ, ತೊಗರಿಬೇಳೆ, ಉಪ್ಪು, ಅಡುಗೆ ಎಣ್ಣೆಯನ್ನು ಮನೆ ಬಾಗಿಲಿಗೆ ತಲುಪಿಸಲಾಗಿತ್ತು.
ಶಿಕ್ಷಣ ಇಲಾಖೆ ಈಗ ಜಿಲ್ಲೆಯ ಒಂದರಿಂದ ಎಂಟನೇ ತರಗತಿಯ 1.60 ಲಕ್ಷ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ 1.20 ಲಕ್ಷ ಮಕ್ಕಳು ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಉಳಿದ ಮಕ್ಕಳು ಕೂಡ ಬ್ಯಾಂಕ್ ಖಾತೆ ತೆರೆದು ಮಾಹಿತಿ ನೀಡತೊಡಗಿದ್ದಾರೆ.
ಬ್ಯಾಂಕ್ ಖಾತೆ ಹೊಂದಿರುವ ವಿದ್ಯಾರ್ಥಿಗಳ ಸಂಪೂರ್ಣ ವಿವರಗಳನ್ನು ತಂತ್ರಾಂಶದಲ್ಲಿ ಅಳವಡಿಸಲು ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.
ಬ್ಯಾಂಕ್ ಖಾತೆ ಇಲ್ಲದ ವಿದ್ಯಾರ್ಥಿಗಳು ರಾಷ್ಟ್ರೀಕೃತ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು ಅಥವಾ ಪೋಸ್ಟ್ ಆಫೀಸ್ ಗಳಲ್ಲಿ ಖಾತೆ ತೆರೆದು ಶಾಲೆಯ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳ ವಿವರಗಳನ್ನು ತಂತ್ರಾಂಶದಲ್ಲಿ ಅಳವಡಿಸಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು. ಈಗಾಗಲೇ 3.6 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಹೇಳಲಾಗಿದೆ.