ಪತಿ ಮನೆಯವರು ನೀಡುತ್ತಿದ್ದ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿಯೊಬ್ಬರು ಶಾಲಾ ಕೊಠಡಿಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
34 ವರ್ಷದ ಬಸಮ್ಮ ಅಲಿಯಾಸ್ ರೂಪಾ ಸಾವಿಗೆ ಶರಣಾದ ಶಿಕ್ಷಕಿಯಾಗಿದ್ದು, ಇವರು ಹಡಗಲಿಯ ನ್ಯಾಷನಲ್ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಇವರ ಪತಿ ಅರ್ಜುನ್ ಸಹ ಇದೇ ಶಾಲೆಯಲ್ಲಿಯೇ ಶಿಕ್ಷಕನಾಗಿದ್ದು, ಹತ್ತು ವರ್ಷಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. ಇದಾದ ಬಳಿಕ ಪತಿ ಕುಟುಂಬದವರಿಂದ ವರದಕ್ಷಿಣೆ ಕಿರುಕುಳ ಆರಂಭವಾಗಿತ್ತು.
ಇದರಿಂದ ಮನನೊಂದಿದ್ದ ರೂಪಾ ಭಾನುವಾರದಂದು ಕೆಲಸದ ನೆಪ ಹೇಳಿ ಶಾಲೆಗೆ ಬಂದಿದ್ದು, ಶಾಲಾ ಕೊಠಡಿಯಲ್ಲಿಯೇ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಅಲ್ಲದೆ ತಮ್ಮ ಸಾವಿಗೂ ಮುನ್ನ ರೂಪಾ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಹೇಳಲಾಗಿದೆ.